ಮೈಸೂರು :ದೇಶದ ಎಲ್ಲಾ ಸರ್ಕಾರಿ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಬೇಕು. ಸರ್ಕಾರ ಇರುವುದು ಕಾರ್ಖಾನೆಗಳನ್ನು ನಡೆಸಲು ಅಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಅರಮನೆಗೆ ತೆರಳಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಕಾರ್ಖಾನೆಗಳನ್ನು ನಡೆಸುವುದಕ್ಕಿಂತ, ಖಾಸಗೀಕರಣ ಮಾಡುವುದರಿಂದ ಲಾಭದತ್ತ ಮುಖ ಮಾಡ್ತವೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದರು.
ಖಾಸಗೀಕರಣದಿಂದ ಲಾಭ ಸಾಧ್ಯವಂತೆ.. ಮಾಜಿ ಸಚಿವ ಮುರುಗೇಶ್ ನಿರಾಣಿ ಹೀಗಂದರು.. ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಿರೋಧ ಪಕ್ಷದವರು ಎಂಬ ಕಾರಣಕ್ಕೆ ಟೀಕೆ ಮಾಡಬಾರದು. ಅವರ ಸರ್ಕಾರ ಎಷ್ಟು ಕಂಪನಿಗಳು ಖಾಸಗೀಕರಣ ಮಾಡಿಲ್ಲ ಹೇಳಿ ಎಂದರು. ಕಂಪನಿಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಬಾರದು ಎಂದು ಟಾಂಗ್ ನೀಡಿದರು.
ಸಕ್ಕರೆ ಕಾರ್ಖಾನೆಯಿಂದ ರೈತರಿಗೆ 32 ಕೋಟಿ ರೂ. ಬಾಕಿ ಇದೆ. ಅದನ್ನು ಎರಡು ವಾರದಲ್ಲಿ ಕ್ಲಿಯರ್ ಮಾಡುತ್ತೇನೆ. ರಾಜ್ಯದ ಬೇರೆ ಬೇರೆ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ ಎಂಬುವುದು ಸರ್ಕಾರಕ್ಕೂ ಗೊತ್ತಿದೆ ಎಂದು ತಮ್ಮ ಕಂಪನಿಯನ್ನ ಸಮರ್ಥಿಸಿಕೊಂಡರು.
ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಆಯ್ಕೆ ಮಾಡಿರುವುದು ಪಕ್ಷದ ಹೈಕಮಾಂಡ್ ತೀರ್ಮಾನ. ಅದಕ್ಕೆ ನಾವೆಲ್ಲ ಬದ್ಧ, ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದರು.