ಮೈಸೂರು: ನಂಜನಗೂಡಿಗೆ ಬಂದಿದ್ದ ಹಾವೇರಿಯ ಯುವಕನೊಬ್ಬ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, ನಾಪತ್ತೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಂಜನಗೂಡಿನ ಬಿಳಿಗೆರೆ ಪೋಲಿಸ್ ಠಾಣೆ ಪೊಲೀಸರು ತನಿಖೆ ಕೈಗೊಂಡ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಹೆಚ್ಚಿನ ತನಿಖೆ ನಡೆಸಿದಾಗ, ವಿದ್ಯಾರ್ಥಿನಿಯೊಬ್ಬಳ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾರಣಕ್ಕಾಗಿ ಯುವಕ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ಹಿರೆಹಳ್ಳಿ ಗ್ರಾಮದ ಚಂದ್ರಗೌಡ (25) ಹತ್ಯೆಯಾದ ಯುವಕ, ಈತ ನಂಜನಗೂಡು ತಾಲೂಕಿನ ವಿದ್ಯಾರ್ಥಿಯೊರ್ವಳನ್ನ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಲ್ಲದೇ, ಅ ವಿಡಿಯೋ ಗಳನ್ನು ಆಕೆಯ ಅಣ್ಣನಿಗೆ ಕಳುಹಿಸಿದ ಹಿನ್ನೆಲೆಯಲ್ಲಿ ಆತನನ್ನು ನಂಜನಗೂಡು ತಾಲೂಕಿಗೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಹಾವೇರಿಯಿಂದ ನ.20ರಂದು ನಂಜನಗೂಡಿಗೆ ಆಗಮಿಸಿದ ಚಂದ್ರಗೌಡ ನಾಪತ್ತೆಯಾಗಿದ್ದಾನೆ ಎಂದು, ಆತನ ಪರಿಚಯಸ್ಥರಾದ ತಿ.ನರಸೀಪುರ ತಾಲೂಕಿನ ಮಂಜಪ್ಪ ಎಂಬುವವರು ಡಿ.29ರಂದು ದೂರು ನೀಡಿದ್ದರು, ಈ ಕುರಿತು ಬಿಳಿಗೆರೆ ಠಾಣೆ ಸಬ್ ಇನ್ಸ್ಪೆಕ್ಟರ್ ಟಿ.ಆರತಿ ತನಿಖೆ ಕೈಗೊಂಡಿದ್ದರು. ಚಂದ್ರ ಗೌಡನ ಜೊತೆ ನಾಪತ್ತೆಯಾದ ದಿನ ಇದ್ದ ಇಬ್ಬರನ್ನ ಪತ್ತೆ ಮಾಡಿ ಜ.1ರಂದು ಅವರನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಚಂದ್ರಗೌಡ ಹತ್ಯೆ ಅಗಿರುವುದು ಬಯಲಾಗಿದೆ.
ಪ್ರಕರಣದ ಹಿನ್ನೆಲೆ:ಹತ್ಯೆಗಿಡಾದ ಚಂದ್ರಗೌಡನ ಚಿಕ್ಕಪ್ಪನ ಮಗಳು ತಿ.ನರಸೀಪುರ ತಾಲೂಕಿನ ವಸತಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೋವಿಡ್ ಸಂಧರ್ಭದಲ್ಲಿ ಆನ್ ಲೈನ್ ಶಿಕ್ಷಣದ ವೇಳೆ ಅವರ ವಿದ್ಯಾರ್ಥಿಗಳ ಗ್ರೂಪ್ ನಲ್ಲಿ ತನ್ನ ದೊಡ್ಡಪ್ಪನ ಮಗ ಚಂದ್ರಗೌಡನನ್ನು ಕೂಡ ಸೇರಿಸಿದ್ದರು. ಈ ಗ್ರೂಪ್ ನಿಂದ ನಂಜನಗೂಡು ತಾಲೂಕಿನ ವಿದ್ಯಾರ್ಥಿಯೊಬ್ಬಳ ಫೋಟೋಗಳನ್ನ ಡೌನ್ ಲೋಡ್ ಮಾಡಿಕೊಂಡ ಚಂದ್ರಗೌಡ, ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ನಂಜನಗೂಡು ತಾಲೂಕಿನ ವಿದ್ಯಾರ್ಥಿನಿಯ ವಾಟ್ಸ್ಆ್ಯಪ್ಗೆ ರವಾನಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ನಂತರ ಆಕೆಯನ್ನು ಮೈಸೂರಿನ ಲಾಡ್ಜ್ವೊಂದಕ್ಕೆ ಕರೆಸಿಕೊಂಡು, ಲೈಂಗಿಕ ಕ್ರಿಯೆ ನಡೆಸಿ, ಅದನ್ನೂ ಕೂಡ ವಿಡಿಯೋ ಹಾಗೂ ಫೋಟೊ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.