ಮೈಸೂರು: ಖಾಲಿ ನಿವೇಶನದಲ್ಲಿ ಬರ್ಬರವಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸುವಲ್ಲಿ ಇಲವಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಬ್ಬರು ರಾಜಸ್ತಾನ ಮೂಲದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ರಾಜಸ್ತಾನ ಮೂಲದ ತೇಜ್ಮಾಲ್ ರಾಯೀಕ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೂಟಗಳ್ಳಿಯಲ್ಲಿ ರವೀಶ್ (36) ಎಂಬಾತ ಮೊಬೈಲ್ ಹಾಗೂ ಡಿಟಿಹೆಚ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಆದರೆ ಜೂ.10 ರಂದು ಈತ ಆದೀಶ್ವರ ನಗರದ ಖಾಲಿ ನಿವೇಶನದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ.
ಈ ಸಂಬಂಧ ತನಿಖೆ ಕೈಗೊಂಡ ಇಲವಾಲ ಪೊಲೀಸರು ರಾಜಸ್ತಾನ ಮೂಲದ ತೇಜ್ಮಾಲ್ ರಾಯೀಕ ಹಾಗೂ ಪ್ರಕಾಶ್ ಎಂಬುವವರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾಗ ಕೊಲೆಯಾದ ರವೀಶ್ ಜೊತೆಗೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿತ್ತು. ಅದಕ್ಕಾಗಿ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದ್ದು, 24 ಗಂಟೆಯೊಳಗೆ ಕೊಲೆ ಪ್ರಕರಣ ಭೇದಿಸಿದ ಇಲವಾಲ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ 5 ಸಾವಿರ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕೊಲೆ ಮಾಡಲು ಬಳಸಿದ್ದ ಕ್ರಿಕೆಟ್ ಬ್ಯಾಟ್ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.