ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನವರಾತ್ರಿ ಕೊನೆಯ ಧಾರ್ಮಿಕ ಕಾರ್ಯಕ್ರಮವಾದ ಮುಡಿ ಉತ್ಸವ ಮಂಗಳವಾರ ಸಂಜೆ ರೋಹಿಣಿ ನಕ್ಷತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಮೈಸೂರು ಮಹಾರಾಜರು ಚಾಮುಂಡೇಶ್ವರಿ ತಾಯಿಗೆ ನೀಡಿರುವ ವಜ್ರ ವೈಢೂರ್ಯ, ಪಚ್ಚೆ ಹಾಗೂ ಚಿನ್ನದ ಆಭರಣಗಳಿಂದ ಮೂರ್ತಿ ಶೋಭಿಸಿತು.
ನವರಾತ್ರಿ ಸಮಯದಲ್ಲಿ ಚಾಮುಂಡೇಶ್ವರಿ ಮೂಲ ಮೂರ್ತಿಗೆ 10 ದಿನಗಳ ಕಾಲ ಪ್ರತಿದಿನವೂ ಒಂದೊಂದು ವಿಶೇಷ ಅಲಂಕಾರ ಮಾಡಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಮೈಸೂರು ಮಹಾರಾಜರು ನೀಡಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೂ 9 ದಿನಗಳ ಕಾಲ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ಹಾಗೂ ದೇವಿಗೆ ದರ್ಬಾರ್ ಉತ್ಸವ ಮಾಡಲಾಗುತ್ತದೆ. ಇದರೊಂದಿಗೆ ಮಹೋತ್ಸವ ಕೂಡ ಇರುತ್ತದೆ. ಕಳೆದ ಶನಿವಾರ ಚಾಮುಂಡೇಶ್ವರಿ ತೆಪ್ಪೋತ್ಸವ ಬಳಿಕ ಶಯನೋತ್ಸವ ನಡೆಯಿತು. ಅ. 31ರಂದು (ನಿನ್ನೆ) ಮುಡಿ ಉತ್ಸವ ನಡೆಸಲಾಯಿತು.
ಮುಡಿ/ಜವೈರಿ ಉತ್ಸವ ಎಂದರೇನು?: ನವರಾತ್ರಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ತಾಯಿಯನ್ನು ಆವಾಹನೆ ಮಾಡಲಾಗುತ್ತದೆ. ಬಳಿಕ ನವರಾತ್ರಿ ಪೂಜೆ, ರಥೋತ್ಸವ, ತೆಪ್ಪೋತ್ಸವ ಆ ನಂತರದ ಕೊನೆಯ ಪೂಜೆಯೇ ಮುಡಿ ಅಥವಾ ಜವೈರಿ ಉತ್ಸವ. ಈ ಉತ್ಸವ ರೋಹಿಣಿ ನಕ್ಷತ್ರದಲ್ಲಿ ನಡೆಯುತ್ತದೆ. ಉತ್ಸವಕ್ಕಾಗಿ ಮಹಾರಾಜರು ಚಾಮುಂಡೇಶ್ವರಿ ತಾಯಿಗೆ ನೀಡಿರುವ ವಜ್ರ ವೈಢೂರ್ಯ, ಪಚ್ಚೆ ಹಾಗೂ ಚಿನ್ನದ ಆಭರಣಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿರುತ್ತದೆ. ಈ ಎಲ್ಲಾ ಆಭರಣಗಳನ್ನು ಮುಡಿ ಉತ್ಸವದ ದಿನ ತಂದು, ದೇವಿಯನ್ನು ಅಲಂಕರಿಸಲಾಗುತ್ತದೆ.