ಮೈಸೂರು: ಸಿದ್ದರಾಮಯ್ಯ ಬಂಡವಾಳ ಮೂವತ್ತು ವರ್ಷದಿಂದ ಗೊತ್ತು ಈ ಚುನಾವಣೆಯಲ್ಲಿ ಅವರ ಬಂಡವಾಳ ಬಿಚ್ಚಿ ಇಡುತ್ತೇನೆ ಎಂದ ಎಂಟಿಬಿ ನಾಗರಾಜ್ ಅವರಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಮೂವತ್ತು ವರ್ಷದಿಂದ ಜೊತೆಯಲ್ಲೇ ಇದ್ದ, ಈಗ ಬಂಡವಾಳ ಬಿಚ್ಚಿಡ್ತಾನೆ ಎನ್ನುತ್ತಾನೆ. ಬಂಡವಾಳ ಇದ್ದರೆ ತಾನೆ ಬಿಚ್ಚಿಡುವುದು ಎಂದು ಕುಟುಕಿದರು. ಅನರ್ಹ ಶಾಸಕರು ಆಗ ಶಾಸಕರಾಗಿದ್ದಾಗ ಯಾಕೆ ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ. ಉಪ ಚುನಾವಣೆ ಬಂದಾಗ ಕ್ಷೇತ್ರ ನೆನಪಾಯಿತೆ? ಗೆದ್ದು ಯಾರು ಕೂಡ ಮಂತ್ರಿಯಾಗಲ್ಲ ಅದೆಲ್ಲ ಚುನಾವಣೆ ಗಿಮಿಕ್ ಎಂದು ಟೀಕಿಸಿದರು.
ಎಂಟಿಬಿ ಹೇಳಿಕೆಗೆ ಸಿದ್ದು ತಿರುಗೇಟು ಹೆಚ್.ವಿಶ್ವನಾಥ್ ಅವರು 1978ರಲ್ಲಿಯೇ ಶಾಸಕರಾದವರು. ಆಗ ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಪಕ್ಷದವರೇ ಸಿಎಂ ಆಗಿ ಆಡಳಿತ ನಡೆಸಿದರು. ಆ ಸಂದರ್ಭದಲ್ಲಿ ಚಕಾರ ಎತ್ತದ ವಿಶ್ವನಾಥ್ ಉಪಚುನಾವಣೆ ವೇಳೆ ಚಕಾರ ಎತ್ತುತ್ತಿದ್ದಾರೆ. ಇದೆಲ್ಲ ಚುನಾವಣೆಗೆ ಮಾತ್ರ ಎಂದು ಜನರಿಗೂ ಗೊತ್ತಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿದ ಶಾಸಕರನ್ನು ಅನರ್ಹ ಮಾಡಿ ಸುಪ್ರೀಂಕೋರ್ಟ್ ಸ್ಪೀಕರ್ ನಡೆಯನ್ನು ಎತ್ತಿ ಹಿಡಿದಿದೆ. ಆಡಿಯೋ ಸಂಬಂಧ ರಾಷ್ಟ್ರಪತಿಗೆ ದೂರು ನೀಡಲು ಸಮಯ ಕೇಳಿದ್ದೀವಿ. ಈ ಪ್ರಕರಣಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದಿರುವ ಯಡಿಯೂರಪ್ಪ ಲೀಗಲ್ ಎಕ್ಸ್ ಪಟ್೯? ಎಂದು ಸಿದ್ದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್ಡಿಎಯಿಂದ ಹೊರಬಂದ ನಂತರವೇ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ನಾವು ಹಿಂದುತ್ವ ವಿರೋಧಿಯಲ್ಲ, ಕೋಮುವಾದದ ವಿರೋಧಿಗಳು ಎಂದು ಹೇಳುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಿದ್ದು ಕುಟುಕಿದರು.