ಮೈಸೂರು: ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಪರಸ್ಪರ ಕಟು ಶಬ್ದಗಳಿಂದ ನಿಂದಿಸಿದ್ದರು. ಈಗ ಇಬ್ಬರು ಒಂದಾಗುತ್ತಾರೆಂದರೆ ಅದಕ್ಕೆ ಏನು ಹೇಳೋದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವಿಶ್ವನಾಥ್ ಬಗ್ಗೆ ನಾನು ಏನೂ ಪ್ರತಿಕ್ರಿಯೆ ಕೊಡದೇ ಇರುವುದು ಒಳ್ಳೆಯದು. ಸಿದ್ದರಾಮಯ್ಯ ಮತ್ತು ವಿಶ್ಚನಾಥ್ ಪರಸ್ಪರ ಏನೇನು ಮಾತನಾಡಿದ್ದಾರೆ, ಏನೇನು ವಾಗ್ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ನೆನಪಿಸಿಕೊಳ್ಳಲಿ ಎಂದು ಕುಟುಕಿದರು.
ಖರ್ಗೆಗೆ ರಾಜಕೀಯ ಹೋರಾಟದ ಹಿನ್ನೆಲೆ ಇಲ್ಲ: ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಮಲ್ಲಿಕಾರ್ಜುನ ಖರ್ಗೆಗೆ ಇಲ್ಲ. ಖರ್ಗೆಗೆ ಯಾವ ಹೋರಾಟದ ಹಿನ್ನೆಲೆ ಇದೆ?, ರಾಜಕೀಯವಾಗಿ ಯಾವುದೇ ಹೋರಾಟ ಮಾಡಿ ಬಂದವರಲ್ಲ. ಯಾವುದೇ ಸಿಎಂಗಳು ಬಂದಾಗಲೂ ಅವರನ್ನು ಓಲೈಸಿ ಮಂತ್ರಿ ಸ್ಥಾನ ಪಡೆದುಕೊಳ್ಳುತ್ತಿದ್ದೀರಾ ಎಂದು ಲೇವಡಿ ಮಾಡಿದರು.
ಈಗ ಕಾಂಗ್ರೆಸ್ ಪಕ್ಷಕ್ಕೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಖರ್ಗೆ ಸಿಕ್ಕಿದ್ದಾರೆ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಅನ್ನೋ ಗಾದೆಯಂತಾಗಿದೆ ಕಾಂಗ್ರೆಸ್ ಸ್ಥಿತಿ. ಅಷ್ಟಕ್ಕೂ ಯುದ್ದ ಮಾಡಲು ಅವರ ಕೈಗೆ ಏನು ಕೊಟ್ಟಿದೆ? ರೆಟ್ಟಿನ ಗುರಾಣಿ, ಮರದ ಕತ್ತಿ. ಇಂಥವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದಿರೋದು ಕಾಂಗ್ರೆಸ್‌ನ ದೌರ್ಭಾಗ್ಯವೇ ಸರಿ ಎಂದು ಟೀಕಿಸಿದರು.
ದಲಿತ ಸಿಎಂ ಚುನಾವಣಾ ಗಿಮಿಕ್: ಜೆಡಿಎಸ್ನಲ್ಲಿ ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಅಪ್ಪ ಮಕ್ಕಳ ಪಕ್ಷದಲ್ಲಿ ದಲಿತರಿಗೆ ಎಲ್ಲಿ ಸ್ಥಾನಮಾನ?. 92 ವರ್ಷಗಳಾಗಿದ್ದರೂ ಕೂಡ ದೇವೇಗೌಡರೇ ರಾಜ್ಯಸಭೆಗೆ ಬರುತ್ತಾರೆ. ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಆತನ ಮಗ, ಆತನ ಮಗ ಬಿಟ್ಟರೆ ಸೊಸೆ ಎಲ್ಲಾ ಸ್ಥಾನಮಾನಗಳು ಇವರ ಕುಟುಂಬಕ್ಕೆ. ದಲಿತರ ಮೂಗಿಗೆ ತುಪ್ಪ ಮೆತ್ತುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಇವರು 100 ಸೀಟು ಗೆಲ್ಲಲು ಸಾಧ್ಯವಿಲ್ಲ. ಮತ್ತೆ ಎಲ್ಲಿಂದ ಜನತಾದಳದಲ್ಲಿ ದಲಿತರಿಗೆ ಸಿಎಂ ಸ್ಥಾನ?. ಇದು ಚುನಾವಣೆ ಗಿಮಿಕ್ ಎಂದು ಹೇಳಿದರು.