ಮೈಸೂರು: "ಶಿವಾಜಿ ಹಾಗೂ ರಾಯಣ್ಣ ಪ್ರತಿಮೆ ವಿಚಾರದಲ್ಲಿ ಭಾಷೆಯನ್ನು ಮಧ್ಯ ತಂದು ಹೊಡೆಯುವ ಪ್ರಯತ್ನ ಬೇಡ. ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂದು" ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಯಣ್ಣ ಪ್ರತಿಮೆ ವಿಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಶಿವಾಜಿ ಮಹಾರಾಜರು ಈ ದೇಶದ ಸ್ವಾಭಿಮಾನದ ಸಂಕೇತ. ಹಾಗೆಯೇ ಸಂಗೊಳ್ಳಿ ರಾಯಣ್ಣ ನಮ್ಮ ಕರ್ನಾಟಕದ ಸ್ವಾಭಿಮಾನದ ಸಂಕೇತ. ಇವರಿಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಅನ್ನುವ ಪ್ರಶ್ನೆಯನ್ನು ತರುವ ಒಂದು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಇಂಥ ಪ್ರಯತ್ನ ಮಾಡಬೇಡಿ, ರಾಯಣ್ಣ ಪ್ರತಿಮೆಗೂ ಕೂಡ ಅವಕಾಶ ಇರಬೇಕು, ಶಿವಾಜಿ ಪ್ರತಿಮೆಗೂ ಇರಬೇಕು. ಈ ವಿಚಾರವನ್ನು ಕನ್ನಡಿಗರು, ಮರಾಠಿಗರು ಎಂದು ಭಾಷೆಯನ್ನು ಮಧ್ಯದಲ್ಲಿ ತಂದು ಹೊಡೆಯುವ ಪ್ರಯತ್ನ ಬೇಡ" ಎಂದು ಹೇಳಿದರು.
"ವಿವಾದವನ್ನು ಸೌಹಾರ್ದದಿಂದ ಬಗೆಹರಿಸುವ ನಿಟ್ಟಿನಲ್ಲಿ ಯಡಿಯೂರಪ್ಪನವರು ಖುದ್ದಾಗಿ ಎಡಿಜಿಪಿ ಅವರನ್ನು ಕಳುಹಿಸಿದ್ದಾರೆ. ಮಾತುಕತೆ ನಡೆಯುತ್ತಿದೆ. ವಿನಾಕಾರಣ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಇದನ್ನು ಭಾಷಾ ವಿಚಾರವಾಗಿ, ವ್ಯಕ್ತಿ ವಿಚಾರವಾಗಿ ಮಾಡುವುದು ಬೇಡ. ಇಬ್ಬರೂ ಪ್ರಮುಖರು ಬೆಳಗಾವಿಯಲ್ಲಿ ಎಲ್ಲಾ ಭಾಷಿಕರು ವಾಸವಾಗಿದ್ದಾರೆ. ಈ ಘಟನೆಯಿಂದ ಪರಸ್ಪರ ವೈರತ್ವ, ದ್ವೇಷ ಶುರು ಮಾಡುವುದು ಬೇಡ. ಸರ್ಕಾರ ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ" ಎಂದರು.
"ಟಿಪ್ಪು ಪರವಾಗಿ ಹೆಚ್.ವಿಶ್ವನಾಥ್ ಮಾತನಾಡುವ ಮುನ್ನ ಯದುವಂಶದ ಇತಿಹಾಸ ತಿಳಿದು ಮಾತನಾಡಿದರೆ ಒಳ್ಳೆಯದು" ಎಂದು ಇದೇ ವೇಳೆ ಅವರು ತಿಳಿಸಿದರು.
"ಇತ್ತೀಚಿನ ವರ್ಷಗಳಲ್ಲಿ ಮೈಸೂರು ಕಂಡಂತಹ ಅತ್ಯಂತ ಪ್ರಾಮಾಣಿಕ, ಶುದ್ದಹಸ್ತ, ಕ್ರಿಯಾಶೀಲ ಜಿಲ್ಲಾಧಿಕಾರಿ ಅಂದರೆ ಅಭಿರಾಮ್ ಜಿ. ಶಂಕರ್. ಈ ಹಿಂದೆ ವಿ. ಸೋಮಣ್ಣನವರು ಉಸ್ತುವಾರಿ ಸಚಿವರಾಗಿ ಬಂದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಸ್ವಚ್ಛಗೊಳಿಸುವ ಕೆಲಸ ಇರಬಹುದು, ಡಿಪೋಗೆ ಜಾಗ ಬಿಡಿಸಿಕೊಡುವ ವಿಚಾರ ಇರಬಹುದು. ಎಲ್ಲಾ ವಿಚಾರದಲ್ಲೂ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು" ಎಂದು ಶ್ಲಾಘಿಸಿದರು.