ಮೈಸೂರು :ಬಿಜೆಪಿಯನ್ನು 40% ಸರ್ಕಾರ ಎಂದು ಪ್ರಚಾರ ಮಾಡಿದ್ದೀರಿ. ಈಗ ನಿಮ್ಮದೇ ಸರ್ಕಾರ ಬಂದಿದೆ. ಈ ಬಗ್ಗೆ ತನಿಖೆ ಮಾಡಿಸಿ. ಯಾಕೆ ತನಿಖೆ ಮಾಡಿಸುತ್ತಿಲ್ಲ. ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೀರಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '' ಸ್ವಾಮಿ ಸಿದ್ದರಾಮಯ್ಯನವರೇ ತನಿಖೆ ಮಾಡಿ ಸಾರ್.. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ಅರ್ಕಾವತಿ ಡಿನೋಟಿಫಿಕೇಷನ್, ಅದರ ರೀಡೂ ಅಂತಾರೆ. ನಿಮ್ಮ ವಿರುದ್ಧ ಏನೋ ಒಂದು ರೀತಿ ತೋಳ ಬಂತು ತೋಳ ಅನ್ನೋ ಕಥೆ ತರ ಬಿಟ್ಟು ಬಿಟ್ಟು ಬಿಡ್ತೀವಿ ಅಂತಾರೆ. ಬಿಡಲ್ಲ.. ನೀವು ಅಧಿಕಾರಕ್ಕೆ ಬಂದಾದಮೇಲೆ ಈ ಕಥೆ ಹೇಳ್ತಿರಿ. ಅಂದ್ರೆ ಏನ್ ಅಡ್ಜೆಸ್ಟಮೆಂಟ್ಲ್ಲಿದ್ದೀರಾ ನೀವೆಲ್ಲ?, ಸೀನಿಯರ್ಸ್ ಎಲ್ಲಾ ಅಡ್ಜೆಸ್ಟಮೆಂಟ್ಲ್ಲಿದ್ದೀರಾ ನೀವು? ತನಿಖೆಗೆ ಆದೇಶ ಮಾಡಿ. ನೀವು ಹೇಳಿದ್ದ 40 ಪರ್ಸೆಂಟ್ ಆರೋಪವನ್ನು ಪ್ರೂವ್ ಮಾಡಬೇಕು ಈಗ, ಬಿಟ್ಕಾಯಿನ್ನಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ ಅಂದ್ರಲ್ಲಾ ಅದನ್ನೀಗ ಪ್ರೂವ್ ಮಾಡಬೇಕು, ಪಿಎಸ್ಐ ಹಗರಣದಲ್ಲಿ ಯಾರಾರು ಭಾಗಿಯಾಗಿದಾರೆ, ಅವರು ಬಿಜೆಪಿಯವರೇ ಆಗಿರಬರಬಹುದು ಹಿಡಿದು ತಗೋಬನ್ನಿ, ಶಿಕ್ಷೆ ಕೊಡಿ. ನಾನು ಆವತ್ತೇ ಹೇಳಿದೀನಿ, ನಾನು ಬಂದು ಕಾಲಿಗೆ ನಮಸ್ಕಾರ ಮಾಡ್ತಿನಿ ಅಂತಾ. ನಮಸ್ಕಾರ ಅಷ್ಟೇ ಅಲ್ಲಾ, ನಿಮ್ಮ ಪಾದ ಪೂಜೆನೂ ಮಾಡಿ ಹೋಗ್ತಿನಿ'' ಎಂದರು.
ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಿ. ಕರೆಂಟ್ ಬಿಲ್ ಹೆಚ್ಚಾಗಿ ಜನರಿಗೆ ತೊಂದರೆ ಆಗುತ್ತಿದೆ. ಇದನ್ನು ಪ್ರಶ್ನಿಸುವವರನ್ನು ಮನುವಾದಿಗಳು ಎಂದು ಕರೆಯುತ್ತೀರಿ. ಕರೆಂಟ್ ಬಿಲ್ ಜಾಸ್ತಿ ಆಗಿದೆ ಬಿಜೆಪಿ ಸರ್ಕಾರ ಮಾಡಿದ್ದು ಎನ್ನುತ್ತೀರಿ. ಎಲ್ಲವನ್ನೂ ಬದಲಾಯಿಸುತ್ತೇವೆ ಎಂದು ಹೇಳುವ ನೀವು ಇದನ್ನು ತಡೆ ಹಿಡಿಯಿರಿ. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಟಿ ವಿದ್ಯುತ್ ಬೆಲೆ ಜಾಸ್ತಿ ಮಾಡಿದೆ. ಇದಕ್ಕೆ ಬಿಜೆಪಿಯನ್ನು ಯಾಕೆ ಹೊಣೆ ಮಾಡುತ್ತೀರಿ, ಇದನ್ನು ತಡೆ ಹಿಡಿಯಿರಿ ಎಂದು ಆಗ್ರಹಿಸಿದರು.
ಎಷ್ಟೇ ಕಷ್ಟ ಬಂದರೂ ನಾವು ಯೋಜನೆಗಳನ್ನು ಕೊಡುತ್ತೇವೆ ಎಂದು ಹೇಳುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಎಂ ಬಿ ಪಾಟೀಲ್, ಜಾರ್ಜ್ ಇವರು ತಮ್ಮ ಸ್ವಂತ ಆಸ್ತಿಯನ್ನು ಮಾರಿ ಹಣ ಕೊಡುವುದಿಲ್ಲ. ಒಂದಿಷ್ಟು ಜನರಿಂದ ದೋಚಿ ಮತ್ತಷ್ಟು ಜನರಿಗೆ ಕೊಡುತ್ತೀರಿ. ನಿಮ್ಮ ಬೆವರಿನ ಹಣ ಅಲ್ಲ. ಇವೆಲ್ಲ ನಾಟಕ ಬೇಡ. ಕರ್ನಾಟಕದಲ್ಲಿ ಮೊದಲ ಮುಖ್ಯಮಂತ್ರಿಯಿಂದ ಹಿಡಿದು ಬಸವರಾಜ ಬೊಮ್ಮಾಯಿ ಆಡಳಿತದವರೆಗೆ ಎಷ್ಟು ಸಾಲ ಇತ್ತು ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಜೊತೆಗೆ ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದೀರಿ. ಐದು ವರ್ಷಕ್ಕೆ ಎಷ್ಟು ಬೇಕು, ಆದಾಯದ ಮೂಲ ಯಾವುದು ಎಂಬುದರ ಬಗ್ಗೆ ಜನರಿಗೆ ತಿಳಿಸಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದರು.