ಮೈಸೂರು : ನನ್ನನ್ನು ಸೋಲಿಸಿ ಎಂದು ಉದಯಗಿರಿಯಲ್ಲಿ ತಮ್ಮ ಬಾಂಧವರಲ್ಲಿ ಕೇಳುವ ದುಸ್ಥಿತಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮೈಸೂರು-ಟಿ. ನರಸೀಪುರ ಹೆದ್ದಾರಿ ವಿಭಾಗದ ಅಭಿವೃದ್ಧಿ ಕಾರ್ಯಗಳನ್ನು ಚರ್ಚಿಸಲು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯಾವ ಬಡಾವಣೆಯಲ್ಲಿ ನಿಂತು ನನ್ನನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ ನೋಡಿ. ಮೈಸೂರಿನ ಕುವೆಂಪುನಗರ, ಸರಸ್ವತಿಪುರಂ, ಸಿದ್ಧಾರ್ಥ ಬಡಾವಣೆಗಳಲ್ಲಿ ಬಂದು ನಿಂತು ಈ ರೀತಿ ಹೇಳಲು ಆಗುವುದಿಲ್ಲ. ಆದರೆ ಉದಯಗಿರಿಯಲ್ಲಿ ಹೋಗಿ ನನ್ನನ್ನು ಸೋಲಿಸುವಂತೆ ಕೈ ಮುಗಿದು ಕೇಳಿದ್ದಾರೆ. ನನ್ನನ್ನು ಸೋಲಿಸಿ ಎಂದು ಹೇಳುವ ದುಸ್ಥಿತಿಗೆ ಸಿದ್ದರಾಮಯ್ಯ ಅವರು ಬರಬಾರದಿತ್ತು ಎಂದು ಟೀಕಿಸಿದರು.
ನನ್ನನ್ನು ಯಾಕೆ ಸೋಲಿಸಬೇಕು ಅನ್ನೋದಕ್ಕೆ ಕಾರಣ ಕೊಡಿ: ನನ್ನನ್ನು ಜನ ಯಾಕೆ ಸೋಲಿಸಬೇಕು ಎಂಬುದಕ್ಕೆ ಸಿದ್ದರಾಮಯ್ಯ ಅವರು ಐದು ಕಾರಣ ಕೊಡಲಿ. ಮೈಸೂರು-ಬೆಂಗಳೂರು ನಡುವಿನ ಹೆದ್ದಾರಿ ಮಾಡಿದ್ದು ತಪ್ಪಾ?, ಮೈಸೂರನ್ನು ಗ್ರೇಟರ್ ಮೈಸೂರು ಮಾಡಲು ಹೊರಟಿದ್ದು ತಪ್ಪಾ, ವಿಮಾನ ನಿಲ್ದಾಣದ ಅಭಿವೃದ್ಧಿ ಮಾಡಿದ್ದು ತಪ್ಪಾ, ಚಾಮುಂಡಿ ಬೆಟ್ಟ ಅಭಿವೃದ್ಧಿ ಮಾಡಿದ್ದು ತಪ್ಪಾ? ಯಾವ ಕಾರಣಕ್ಕೆ ಮೈಸೂರಿನ ಜನ ನನ್ನನ್ನು ಸೋಲಿಸಬೇಕು ಎಂದು ಐದು ಕಾರಣ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನೀವು 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೀರಿ. ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ಹೇಳಿ. ಸಿದ್ದರಾಮಯ್ಯ ಹೇಳಿದರು ಎಂದು ಜನ ನಿಮ್ಮ ಮಾತನ್ನು ಕೇಳುತ್ತಾರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.