ಮೈಸೂರು:ಬಿಟ್ ಕಾಯಿನ್ (Bitcoin Row) ಬಗ್ಗೆ ತನಿಖೆ ಮಾಡಿದರೆ ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಬೀಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ (MP Prathap simha) ತಿರುಗೇಟು ನೀಡಿದ್ದಾರೆ. ಜಲದರ್ಶಿನಿ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನ ಗಂಭೀರವಾಗಿ ತನಿಖೆ ನಡೆಸಿದರೆ, ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದರು.
ಈಗಾಗಲೇ ಮೊದಲ ಚಾರ್ಜ್ ಶೀಟ್‌ನಲ್ಲಿ ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರೇ ಉಲ್ಲೇಖವಾಗಿದೆ. ಹೀಗಾಗಿ ಇನ್ನಷ್ಟು ತನಿಖೆಯಾದರೆ ಅವರ ಹೆಸರೇ ಹೊರಗೆ ಬರಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಮಹಾನ್ ಆರ್ಥಿಕ ತಜ್ಞರು, ಬಿಟ್ ಕಾಯಿನ್ ಎಂದರೇನು? ಅದು ಹೇಗೆ ವ್ಯವಹಾರ ಆಗಲಿದೆ ಎಂಬುದನ್ನು ವಿವರಿಸಲಿ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ ಎಂದರು.
ಬಿಟ್ ಕಾಯಿನ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಟ್ವೀಟ್ (Priyank Kharge tweet) ವಿಚಾರವಾಗಿ ಮಾತನಾಡಿ, ಸದಾಶಿವನಗರದಲ್ಲಿ 4 ಭವ್ಯ ಬಂಗಲೇ, ಒಂದೇ ನಂಬರ್‌ನ ಕಾರು. ನಾನು ನಿರ್ಗತಿಕ, ಶೋಷಣೆ ಒಳಗಾದವರು ಎಂದು ಹೇಳಿಕೊಳ್ಳುವವರಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯ ಇಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಮೆಚ್ಯುರಿಟಿ ಇದೆಯೋ ಇಲ್ಲವೋ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದರು.