ಮೈಸೂರು: ಜಂಬೂಸವಾರಿ ದಿನ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಸೀರೆ ಕೊಡಲು ಯುದ್ದ ಬೇಡ, ಸರಕಾರದಿಂದಲ್ಲೇ ಸೀರೆ ಕೊಡಲಿ ಎಂದು ಸಂಸದ ಪ್ರತಾಪಸಿಂಹ ಸಲಹೆ ನೀಡಿದರು. ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಬೂಸವಾರಿಯ ಅಂತಿಮ ದಿನ, ಚಾಮುಂಡೇಶ್ವರಿ ದೇವಿಗೆ ಯಾರು ಸೀರೆ ಕೊಡಿಸಬೇಕು ಎಂಬ ಯುದ್ಧ ನಡೆಯುತ್ತಿತ್ತು. ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರಕಾರದಿಂದಲ್ಲೇ ಸೀರೆ ತರುವುದು ಎಂಬ ತೀರ್ಮಾನವಾಗಿತ್ತು. ಅದನ್ನು ಮುಂದುವರಿಸಿಕೊಂಡು ಹೋಗುವಂತೆ ದಸರಾ ಸಭೆಯಲ್ಲಿ ಸಲಹೆ ನೀಡಲಾಗಿದೆ ಎಂದರು.
ಯುವದಸರಾ, ಕ್ರೀಡಾದಸರಾ, ರೈತ, ಗ್ರಾಮೀಣ ದಸರಾವನ್ನು ಮೂರು ವರ್ಷಗಳಿಂದ ಕೋವಿಡ್, ಹಣದ ಕೊರತೆಯಿಂದ ಅದ್ಧೂರಿಯಾಗಿ ಮಾಡಿರಲಿಲ್ಲ. ಈ ಬಾರಿ ಅದ್ಧೂರಿಯಗಿ ಮಾಡಬೇಕು ಎಂದು ಹೇಳಿದರು. ಮಹಿಷ ದಸರಾ ಮುಗಿದ ಅಧ್ಯಾಯ, ಅದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲವೆಂದು ಭಾವಿಸುತ್ತೇನೆ. ಮೈಸೂರು ಜನ ಚಾಮುಂಡೇಶ್ವರಿ ಭಕ್ತರು. ಅದನ್ನು ಅರ್ಥಮಾಡಿಕೊಂಡು ಸಂವೇದನೆಯಿಂದ ಎಲ್ಲರೂ ಮುಂದಿನ ದಿನಗಳಲ್ಲಿ ದಸರಾವನ್ನು ಅಚ್ಚುಕಟ್ಟಾಗಿ ಮಾಡೋಣ ಎಂದು ಮನವಿ ಮಾಡಿದರು.
30 ಕೋಟಿ ರೂ.ವೆಚ್ಚದ ಕಾಮಗಾರಿ ಪರಿಶೀಲನೆ: ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 30 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ, ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಟಿಕೆಟ್ ಕೌಂಟರ್ ಕಚೇರಿ, ಮೇಲ್ಸೇತುವೆ, ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿ, ಸೆಪ್ಟಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ರೈಲ್ವೆ ನಿಲ್ದಾಣದಿಂದ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ಡಬ್ಲಿಂಗ್ ಮಾಡಿಕೊಡುವಂತೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೇಳಿದ್ದೇನೆ, ಅವರು ಒಪ್ಪಿಗೆ ಸೂಚಿಸಿದ್ದಾರೆ. ಅದಷ್ಟು ಬೇಗ ಈ ಕಾಮಗಾರಿಯನ್ನು ಶುರು ಮಾಡುವ ಉದ್ದೇಶವಿದೆ ಎಂದರು.