ಮೈಸೂರು :ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಇಂಗ್ಲಿಷ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ. ಹೆಸರು ಬದಲಾವಣೆಗೂ ಸಂಖ್ಯಾಶಾಸ್ತ್ರಕ್ಕೂ, ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮ ಇಂಗ್ಲಿಷ್ ಹೆಸರು ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಅಕ್ಷರ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅದು ಸಂಖ್ಯಾಶಾಸ್ತ್ರ ಎಂದು ಏನೂ ಇಲ್ಲ. ನೀವು ಸಂಖ್ಯಾಶಾಸ್ತ್ರ ಎಂದರೆ ಅದು ಸಂಖ್ಯಾಶಾಸ್ತ್ರ ಅಷ್ಟೇ. ನನ್ನ ಹೆಸರನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯುವಾಗ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಯಥಾವತ್ತಾಗಿ ಇಂಗ್ಲಿಷ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಈ ಬದಲಾವಣೆಗೂ, ಸಂಖ್ಯಾಶಾಸ್ತ್ರಕ್ಕೂ, ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದರು ಸ್ಪಷ್ಟನೆ ನೀಡಿದರು.
ಹಳೆಯ ಹೆಸರಿನಿಂದಲೇ ಎರಡು ಬಾರಿ ಗೆದ್ದು ಸಂಸದನಾಗಿದ್ಧೇನೆ. ಮೈಸೂರೇ ಗೊತ್ತಿಲ್ಲದ ಸಂದರ್ಭದಲ್ಲಿ ಜನರು ಗೆಲ್ಲಿಸಿದರು. ಎರಡನೇ ಬಾರಿಯೂ ನನ್ನನ್ನು ಜನ ಗೆಲ್ಲಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿ ನಿಂತರೂ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತೇನೆ. ನಾನು ಒಂಥರ ಎಲ್ಲ ಪಕ್ಷದ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲ ಪಕ್ಷದಲ್ಲೂ ಮೋದಿ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ನನಗೆ ಮತ ಹಾಕುತ್ತಾರೆ. ಈಗ ಜೆಡಿಎಸ್ನವರು ಕೂಡ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ ಎಂದರು.