ಮೈಸೂರು: ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಯಾರೇ ಚೆರ್ಚೆಗೆ ಬರಲಿ ಅವರನ್ನ ಸೋಲಿಸುವುದು ನಾನು ಮಾತ್ರ ಎಂದು ಕಾಂಗ್ರೆಸ್ಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದಾರೆ. ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ಸವಿಸ್ತಾರವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ ಎಂದರು.
ಒಂದ್ ಮಾತು ಸತ್ಯ. ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಯಾರೇ ಚರ್ಚೆಗೆ ಬರಲಿ ಅವರನ್ನು ಸೋಲಿಸುವುದು ಈ ಪ್ರತಾಪ್ ಸಿಂಹ ಮಾತ್ರ. ಯಾರು ಚರ್ಚೆಗೆ ಬರಬೇಕು, ಏನು ಚರ್ಚೆಯಾಗಬೇಕು ಎಂಬುದನ್ನ ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದು ಸವಾಲು ಹಾಕಿದರು.
ಓದಿ:ಮೋದಿಯವರು ಯೋಗ ಮಾಡುವ ವೇದಿಕೆ ರಾಜಕೀಯ ವೇದಿಕೆಯಲ್ಲ: ಪ್ರತಾಪ್ ಸಿಂಹ
21ಕ್ಕೆ ಮೈಸೂರಿಗೆ ಮೋದಿ:ಪ್ರಧಾನಿ ಆಗಮನದ ಬಗ್ಗೆ ಮಾತನಾಡಿ, ಮೋದಿ ಅವರು ಯೋಗ ಮಾಡುವ ವೇದಿಕೆ, ರಾಜಕೀಯ ವೇದಿಕೆಯಲ್ಲ. ಮೋದಿ ಅವರ ಜೊತೆ ನನ್ನನ್ನು ಸೇರಿದಂತೆ ಸ್ಥಳೀಯ ಯಾವ ಶಾಸಕರಿಗೂ ಮೋದಿ ಅವರ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ. ಮೋದಿ ಅವರ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ. ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಳಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದರು.
ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿಲ್ಲ. ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶ ಕಲ್ಪಿಸಬಹುದಾಗಿದೆ. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ. ಈಗಾಗಲೇ ನೊಂದಣಿ ಆರಂಭವಾಗಿದೆ. ನೊಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ ಎಂದು ತಿಳಿಸಿದರು.
ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನ ಯಾರು ಹಾಕಬೇಡಿ. ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್ಗಳನ್ನ ಹಾಕುತ್ತದೆ. ನಮ್ಮ ಪಕ್ಷದವರೇ ಇರಲಿ, ಸಂಘ ಸಂಸ್ಥೆಗಳೇ ಆಗಿರಲಿ.. ಯಾವುದೇ ಫ್ಲೆಕ್ಸ್ಗಳನ್ನ ಹಾಕಿ ನಗರದ ಸೌಂದರ್ಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.