ಮೈಸೂರು: ಮುಸ್ಲಿಮರಲ್ಲೂ ನಮ್ಮದೇ ರಕ್ತ ಹರಿಯುತ್ತಿದೆ. ಅವರಲ್ಲಿಯೂ ನಮ್ಮ ಡಿಎನ್ಎ ಇದೆ. ಹುಬ್ಬಳ್ಳಿ ಹಾಗೂ ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿರುವ ಗಲಭೆಯಿಂದ ಅವರ ಮನಸ್ಥಿತಿ ಹೇಗಿದೆ ಎಂಬುದು ಗೊತ್ತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸುತ್ತಾರೆ. ಆದರೆ ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಕಲ್ಲು ತೂರಾಟ ನಡೆಸುವುದಿಲ್ಲ. ಕಲ್ಲು ತೂರಾಟ ನಡೆಸುವುದು ಮುಸ್ಲಿಮರ ಸಂಸ್ಕೃತಿ. ಈ ವಿಚಾರದಲ್ಲಿ ಅವರ ಮನಸ್ಥಿತಿ ಬದಲಾಗಬೇಕು. ಕ್ರಿಶ್ಚಿಯನ್ನರು, ಪಾರ್ಸಿಗಳು, ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರಾಟ ನಡೆಸುವುದಿಲ್ಲ ಎಂದರು.
'ಮುಸ್ಲಿಮರ ಮನಸ್ಥಿತಿ ಬದಲಾಗಬೇಕು': ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಸಮಸ್ಯೆ ಆರಂಭವಾಯಿತು. ಮುಸ್ಲಿಮರು ನಮ್ಮದೇ ದೇಶದವರು, ಅವರಲ್ಲಿಯೂ ನಮ್ಮದೇ ರಕ್ತ ಹರಿಯುತ್ತಿದೆ. ನಮ್ಮದೇ ಡಿಎನ್ಎ ಇದೆ, ಅವರ ಮನಸ್ಥಿತಿ ಬದಲಾಗಬೇಕು. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಬಳಿ ಬುಲ್ಡೋಜರ್ ಬರಲಿದೆ. ಉತ್ತರ ಪ್ರದೇಶದಲ್ಲಿರುವಂತೆ ಇಲ್ಲಿಯೂ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ದಸರಾ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಪೂರ್ಣ:ನಿಗದಿತ ಸಮಯದಲ್ಲಿ ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಲಿದೆ. ಈ ಬಾರಿ ದಸರಾ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಿಪ್ಯಾಡ್ ನಿರ್ಮಾಣ, ನಾಲ್ಕು ಕಡೆ ರೆಸ್ಟ್ ಏರಿಯಾ, 16 ಕಡೆ ಎಂಟ್ರಿ ಮತ್ತು ಎಕ್ಸಿಟ್ ನಿರ್ಮಾಣ, 96 ಕಡೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಮುಖ್ಯಮಂತ್ರಿಗಳು 240 ಎಕರೆ ಭೂಸ್ವಾದಿನಕ್ಕೆ ಒಪ್ಪಿಗೆ ನೀಡಿದ್ದು, ಬಜೆಟ್ನಲ್ಲಿ 319 ಕೋಟಿ ಘೋಷಣೆ ಮಾಡಿದ್ದಾರೆ. ಈಗ ಆ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಸಂಚು.. ಮೌಲ್ವಿ ವಾಸಿಂ ಪಠಾಣ್ ವಿಡಿಯೋ ಬಿಡುಗಡೆ
ಮೈಸೂರು ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ನಗರದ 27 ಕಿಮೀ ವ್ಯಾಪ್ತಿಯಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುವುದು. ಸಿಂಗಾಪುರದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ದೊಡ್ಡ ಯೋಜನೆಗಳು ಮೈಸೂರಿಗೆ ಬರಬೇಕಾದರೆ ಮೈಸೂರು ಗ್ರೇಟರ್ ಮೈಸೂರು ಆಗಬೇಕು ಎಂದರು.
'ರಾಜಮನೆತನದ ಅಭಿಪ್ರಾಯ ಪಡೆಯುತ್ತೇವೆ':ಮೈಸೂರು ನಗರದ ದೇವರಾಜ ಮಾರುಕಟ್ಟೆ ಪುನರುಜ್ಜೀವಗೊಳಿಸುವ ವಿಚಾರದ ಬಗ್ಗೆ ರಾಜಮನೆತನದ ಅಭಿಪ್ರಾಯ ಪಡೆಯುತ್ತೇವೆ. ದೇವರಾಜ ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದೆ. ಮಾರುಕಟ್ಟೆ ಉಳಿಸುವಂತೆ ರಾಜವಂಶಸ್ಥರಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ವಿಚಾರದಲ್ಲಿ ರಾಜವಂಶಸ್ಥರ ಅಭಿಪ್ರಾಯ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.