ಮೈಸೂರು: ಕರ್ನಾಟಕ ರಾಜಕಾರಣದಲ್ಲಿ ಸಿ ಡಿ ವಿಚಾರ, ಆಡಿಯೋ ವಿಚಾರ ಬಿಟ್ಟು ಜನರ ಮುಂದೆ ಅಭಿವೃದ್ಧಿ ವಿಚಾರ ಮಾತನಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಶನಿವಾರ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಮುಂದಿಟ್ಟುಕೊಂಡು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ. ಯಾರ ಬಳಿ ಅಭಿವೃದ್ಧಿ ವಿಚಾರ ಇಲ್ಲವೋ ಅವರು ಸಿಡಿ ವಿಚಾರ ಮಾತನಾಡುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೊಬೈಲ್ ತೆಗೆದರೆ, ಏನಾದರೂ ಒಂದು ವಿಷಯ ಸಿಗುತ್ತದೆ. ಮೊಬೈಲ್ ಒಪನ್ ಮಾಡಿ ಎಂದರೆ, ಎಷ್ಟು ಜನರಿಗೆ ಧೈರ್ಯ ಇದೆ ಹೇಳಿ ಎಂದು ಪ್ರಶ್ನಿಸಿದರು.
ಇಂತ ವಿಚಾರವನ್ನು ಜನ ತಲೆಕೆಡಿಸಿಕೊಳ್ಳುವುದಿಲ್ಲ. ಚುನಾವಣೆಗೆ ಬಂದಾಗ ಈ ವಿಚಾರ ಗೊತ್ತಾಗುತ್ತದೆ. ಸಿ ಡಿ ವಿಚಾರದ ಬಗ್ಗೆ ಮಾತನಾಡುವವರು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮುಂದಿನ ಚುನಾವಣೆ:ಬಿಜೆಪಿ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್ 75 ವರ್ಷಗಳಲ್ಲಿ ಎಷ್ಟು ಮನೆಗೆ ಕುಡಿಯುವ ನೀರು ಕೊಟ್ಟಿದೆ. ನಾವು ಅಲ್ಪ ಸಮಯದಲ್ಲಿ ಎಷ್ಟು ಕುಡಿಯುವ ನೀರು ಹಾಗೂ ಇತರ ಸೌಲಭ್ಯಗಳನ್ನು ನೀಡಿದ್ದೇವೆ ಎಂಬ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಭದ್ರಾ ಯೋಜನೆ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಇದನ್ನ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಈ ಯೋಜನೆಗೆ ಕೋಟಿಗಟ್ಟಲೆ ಹಣ ಘೋಷಣೆ ಮಾಡಿದೆ. ಇದರ ಜೊತೆಗೆ ರೈಲ್ವೆ, ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಸೇರಿದಂತೆ ಹಲವು ಯೋಜನೆಗಳು ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳಾಗಿದ್ದು, ಇದನ್ನ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದರು.
ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪುಕ್ಕಟೆ ನೀರು, ಕರೆಂಟ್, ಕುಕ್ಕರ್, ಟಿವಿ, ಭೂಮಿ ಕೊಡುತ್ತೇವೆಂದು, ತಮಿಳುನಾಡಿನ ಡಿ ಎಂ ಕೆ ಹಾಗೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಲೆವೆಲ್ ಗೆ ಕರ್ನಾಟಕವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಅವರ ಆಸ್ತಿ ಮಾರಿ ಜನರಿಗೆ ಕೊಡುವುದಿಲ್ಲ, ಇಲ್ಲಿಯ ಆಡಳಿತ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಆಸ್ತಿ ಮಾಡಿಕೊಳ್ಳುತ್ತಾರೆ. ಜನರ ತೆರಿಗೆ ದುಡ್ಡನ್ನು ಈ ರೀತಿ ಹಂಚಿ ರಾಜ್ಯವನ್ನ ದಿವಾಳಿ ಮಾಡುತ್ತಾರೆ. ಜನ ಇದನ್ನ ನೆನಪಿಸಿಕೊಳ್ಳಬೇಕು, ಇದೊಂದು ಗಿಮಿಕ್ಸ್ ರಾಜಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.