ಮೈಸೂರು: ವರುಣಾದಲ್ಲಿ ಈ ಬಾರಿ ಸಿದ್ದರಾಮಯ್ಯನವರಿಗೆ ಸೋಲಿನ ಭಯ ಕಾಣಿಸಿಕೊಂಡಿದೆ. ಹಾಗಾಗಿ ಅವರ ಕಾರ್ಯಕರ್ತರಿಂದ ಸೋಮಣ್ಣ ಪ್ರಚಾರ ಮಾಡುವ ಕಡೆ ತೊಂದರೆ ಆಗುತ್ತಿದೆ. ಚುನಾವಣಾ ಆಯೋಗ ವರುಣಾದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಕಾರಣ. ಸಿದ್ದರಾಮಯ್ಯ ಅವರಿಗೆ ಸೋಲಿನ ಹತಾಶೆ ಹಾಗೂ ಭೀತಿಯಿಂದ ಈ ರೀತಿ ಮಾಡಿಸುತ್ತಿದ್ದಾರೆ. ವಿಪಕ್ಷ ನಾಯಕರ ಪಾಳಯದಲ್ಲಿ ಸೋಲಿನ ಭಯ ಶುರುವಾಗಿದೆ. ಬಿಜೆಪಿ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಗಲಾಟೆ ಮಾಡಿಸುವ ಸಣ್ಣತನಕ್ಕೆ ಸಿದ್ದರಾಮಯ್ಯ ಕಡೆಯವರು ಮುಂದಾಗಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ಇದನ್ನೂ ಓದಿ:ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ
ನಿನ್ನೆ ಬಿಜೆಪಿ ಚುನಾವಣಾ ಪ್ರಚಾರ ಮೆರವಣಿಗೆ ಮೇಲೆ ಕಲ್ಲು ತೂರಲು ಬಕೆಟ್ನಲ್ಲಿ ಕಲ್ಲುಗಳನ್ನು ತಂದಿದ್ದರು. ಸಿದ್ದರಾಮನಹುಂಡಿಯ ಸೋದರನ ಮನೆಯ ಮುಂದೆ ಈ ಘಟನೆ ನಡೆದಿದೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಅವರಿಗೆ ತಮ್ಮ ಜಾತಿ ಮುಖ್ಯ ಎಂಬುದು ವರುಣಾ ಜನರಿಗೆ ಗೊತ್ತಾಗಿದೆ. ಈ ಕಾರಣದಿಂದ ಬೇರೆ ಜಾತಿಯವರು ಸೋಮಣ್ಣ ಪರ ನಿಂತಿದ್ದಾರೆ. ಸೋಲಿನ ಭಯದಿಂದ ವರುಣಾದಲ್ಲಿ ಈ ರೀತಿ ಘಟನೆಗಳು ನಡೆಯಲು ಸಿದ್ದರಾಮಯ್ಯ ಕಾರಣ ಎಂದು ಸಂಸದರು ಆರೋಪಿಸಿದರು.