ಮೈಸೂರು:ಸಂಸತ್ ಮೇಲಿನ ಸ್ಮೋಕ್ ಗ್ಯಾಸ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ತಳಮಟ್ಟದ ಕಾಂಗ್ರೆಸ್ ನಾಯಕರಿಂದ ಹಿಡಿದು ಸಿಎಂವರೆಗೆ ನನ್ನ ತೇಜೋವಧೆ ಮಾಡಲಾಗುತ್ತಿದೆ. ಅವರಿಗೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗುತ್ತಿಲ್ಲ. ಈ ಮೂಲಕ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಇಂದು ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್ಸಿಗರು ಈ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಸೋಷಿಯಲ್ ಮಿಡಿಯಾದಲ್ಲಿ ನನ್ನ ಕೈಗೆ ಬಾಂಬ್ ಕೊಟ್ಟು, ಮುಸ್ಲಿಮರು ಬಳಸುವ ಧ್ವಜವನ್ನು ನನ್ನ ಕುತ್ತಿಗೆಗೆ ಸುತ್ತಿ ತೇಜೋವಧೆಗೆ ಇಳಿದಿದ್ದಾರೆ. ಕಾಂಗ್ರೆಸ್ಸಿಗರು ಹೇಳುವ ಎಲ್ಲ ಮುಸ್ಲಿಮರು ಭಯೋತ್ಪಾದಕರೆನ್ನುವ ರೀತಿಯಲ್ಲಿ ಎಲ್ಲ ಮುಸ್ಲಿಮರಿಗೂ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ: ಕಾಂಗ್ರೆಸ್ನವರಿಗೆ ದಮ್ಮು, ತಾಕತ್ತು ಇದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಎದುರಿಸಲಿ. ನಾನು ಕಳೆದ ಒಂಬತ್ತುವರೆ ವರ್ಷಗಳಿಂದ ಮೈಸೂರು-ಕೊಡಗು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸಿದ್ದರಾಮಯ್ಯ ಕಳೆದ 40 ವರ್ಷಗಳಿಂದ ಮೈಸೂರಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನೊಂದಿಗೆ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.