ಮೈಸೂರು:ಅಕ್ಟೋಬರ್ 13 ರಂದು ಮಹಿಷಾ ದಸರಾ ತಡೆಯುವ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ನಡೆಸಲಾಗುತ್ತದೆ. ಇತ್ತೀಚೆಗೆ ಕೆಲವು ವ್ಯಕ್ತಿಗಳು ಮಹಿಷ ದಸರಾ ಆಚರಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದು, ಮಹಿಷ ದಸರಾ ಮಾಡಲು ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಕಮಿಷನರ್ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ರು.
ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಡ ಅಧಿದೇವತೆ ಚಾಮುಂಡಿ ತಾಯಿ ವಾಸವಿರುವ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾವನ್ನು ಆಚರಣೆ ಮಾಡಲು ಬಿಡುವುದಿಲ್ಲ. ಇದಕ್ಕಾಗಿ ಅಕ್ಟೋಬರ್ 13 ರಂದು 5 ಸಾವಿರ ನಾಗರಿಕರ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿ, ದಿನಿವಿಡೀ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಮಹಿಷಾ ದಸರಾವನ್ನು ಹುಟ್ಟು ಹಾಕಿದ್ದಾರೆ. ಪ್ರಸ್ತುತ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮಾಡುವ ವಿಚಾರ ಮಾತನಾಡುತ್ತಿದ್ದಾರೆ. ಇದನ್ನು ತಡೆಯಲು ಅ. 13ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿ ಚಲೋ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸರ್ಕಾರದ ವಿರುದ್ಧ ಪ್ರತಾಪ್ ವಾಗ್ದಾಳಿ: ''ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯದ ಆಡಳಿತ ಬಂದಿದೆ. ಇದಕ್ಕೆ ಪೂರಕವಾಗಿರುವ ಶಿವಮೊಗ್ಗ, ಕೋಲಾರ ಪ್ರಕರಣಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಈಗ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ'' ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.