ಮೈಸೂರು: ಪ್ರತಿದಿನ ಸಂಜೆ ವಿಡಿಯೋ ಕಾನ್ಫರೆನ್ಸ್ ಮಾಡಿಕೊಂಡು ಕೋವಿಡ್ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಪರಿಸ್ಥಿತಿ ಸುಧಾರಣೆ ಆಗುವುದಿಲ್ಲ. ಖುದ್ದಾಗಿ ಜಿಲ್ಲಾಧಿಕಾರಿಗಳು ಹಾಗು ಆರೋಗ್ಯಾಧಿಕಾರಿಗಳು ಫೀಲ್ಡ್ಗೆ ಇಳಿಯಬೇಕು ಎಂದು ಪರೋಕ್ಷವಾಗಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್‌ಸಿಂಹ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರತಿನಿತ್ಯ ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರ ಪ್ರದೇಶದಲ್ಲಿ ಸ್ವಲ್ಪ ಇಳಿಮುಖವಾಗಿದೆ. ತಾಲೂಕು ಕೇಂದ್ರಗಳಲ್ಲಿ 50 ರಿಂದ 60 ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆ ಉಸ್ತುವಾರಿ ಸಚಿವರು ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಪ್ರತಿದಿನ ಸಂಜೆ ಕಚೇರಿಯಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ನ ಅಂಕಿ ಅಂಶಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಫೀಲ್ಡ್ಗೆ ಇಳಿದು ಕೆಲಸ ಮಾಡಬೇಕೆಂದು ಹೇಳಿದರು.
ಖುದ್ದಾಗಿ ಜಿಲ್ಲಾಧಿಕಾರಿಗಳು, ಡಿ.ಹೆಚ್.ಒ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ ಗಳು ಫೀಲ್ಡ್ಗೆ ಇಳಿಯಬೇಕು. ಗ್ರಾಮಾಂತರ ಭಾಗದ ಸ್ಥಿತಿಗತಿ ಪರಿಶೀಲನೆ ಮಾಡಬೇಕು. ಅಲ್ಲಿನ ಕೋವಿಡ್ ಕೇರ್ ಸೆಂಟರ್ಗಳಿಗೆ ಭೇಟಿ ನೀಡಬೇಕು. ಆಗ ಮಾತ್ರ ಅಲ್ಲಿನ ವ್ಯವಸ್ಥೆ ಮತ್ತು ಅವ್ಯವಸ್ಥೆಯನ್ನು ಕಾಣಬಹುದು ಎಂದರು.