ಮೈಸೂರು:ಒಂಬತ್ತು ವರ್ಷಗಳ ಹಿಂದೆ ಉಂಟಾಗಿದ್ದ ಭೀಕರ ಬರಗಾಲದಿಂದ ಎಚ್ಚೆತ್ತ ಗ್ರಾಮಸ್ಥರು, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಾರದೆಂದು ಸಂಪೂರ್ಣವಾಗಿ ಕೆರೆಯ ನೀರನ್ನು ಪ್ರಾಣಿ, ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ.
ಹೌದು, ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಮದ ಕೆರೆ ಜಾನುವಾರುಗಳಿಗೆ ಬಾಯಾರಿಕೆ ನೀಗಿಸುವ ಜಲಮೂಲವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದರೂ, ನೀರಿನ ಚಿಂತೆ ದೂರು ಮಾಡಿದೆ. ಅಲ್ಲದೇ, ಕೆರೆ ನೀರು ಉಳಿಸಲು ಗ್ರಾಮಸ್ಥರು ಸ್ವಯಂ ನಿರ್ಬಂಧವೊಂದನ್ನ ಹಾಕಿಕೊಂಡಿದ್ದಾರೆ. ಈ ನೀರನ್ನು ಜನ ಬಳಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆರೆ ಮುಂಭಾಗ ನೀರು ಜಾನುವಾರುಗಳ ಉಪಯೋಗಕ್ಕೆ ಮಾತ್ರ ಎಂಬ ನಾಮಫಲಕ ಅಳವಡಿಸಲಾಗಿದೆ.
ಗ್ರಾಮಸ್ಥರೆಲ್ಲರೂ ಸೇರಿ ಪಿಡಿಓ ಮೂಲಕ ಪ್ರಕಟಣೆ ಹೊರಡಿಸಿದ್ದು, ಇದರಲ್ಲಿ ಕೆರೆಯ ನೀರನ್ನು ಜಾನುವಾರುಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಾಮಫಲಕ ಹಾಕಲಾಗಿದೆ. ಒಂಬತ್ತು ವರ್ಷಗಳ ಹಿಂದಿನ ಭೀಕರ ಬರಗಾಲದಿಂದ ಎಚ್ಚತ್ತ ಮೊಸಂಬಾಯನಹಳ್ಳಿ ಗ್ರಾಮಸ್ಥರು, ಕೆರೆ ಸಂರಕ್ಷಿಸಿ ವರ್ಷ ಪೂರ್ತಿ ಮೂಕ ಪ್ರಾಣಿಗಳ ದಾಹ ತೀರಿಸಲು ಮುಂದಾಗಿದ್ದಾರೆ. ಪ್ರಾಣಿ ಪಕ್ಷಿಗಳ ದಾಹದ ಜೊತೆಗೆ ಗ್ರಾಮದ ಸುತ್ತಮುತ್ತ ಅಂತರ್ಜಲ ವೃದ್ಧಿಗೂ ಕೆರೆ ಉಪಯೋಗವಾಗುವಂತೆ ಮಾಡುತ್ತಿದ್ದಾರೆ.