ಮೈಸೂರು: ಕಬಿನಿ ಹಾಗೂ ತಾರಕ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನಲೆಯಲ್ಲಿ ರಸ್ತೆ ಹಾಗೂ ಶಾಲೆಗಳು ಮುಳುಗಡೆಯಾಗಿರುವ ಘಟನೆ ಸರಗೂರು ತಾಲೂಕು ಯರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಬಿನಿ, ತಾರಕ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಶಾಲೆ, ರಸ್ತೆ ಜಲಾವೃತ - ಕಬಿನಿ ಹಾಗೂ ತಾರಕ ಜಲಾಶಯ
ಕಬಿನಿ ಹಾಗೂ ತಾರಕ ಜಲಾಶಯದಿಂದ ಹೆಚ್ಚುವರಿಯಾದ ನೀರನ್ನು ನದಿಗೆ ಬಿಟ್ಟ ಪರಿಣಾಮ ಸರಗೂರು ತಾಲೂಕಿನ ಯರಹಳ್ಳಿ ಗ್ರಾಮದ ರಸ್ತೆ ಹಾಗೂ ಶಾಲೆ ಸಂಪೂರ್ಣ ಜಲಾವೃತವಾಗಿದೆ.
ಕಳೆದ 3 ದಿನಗಳಿಂದ ಕೇರಳದ ವಯನಾಡು ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ತಾರಕ ಜಲಾಶಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾನಯ ಭರ್ತಿಯಾಗಿದೆ. ಈ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ತಾರಕ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಪರಿಣಾಮ ಸರಗೂರು ಹಾಗೂ ಸರಗೂರು ಹ್ಯಾಂಡ್ ಪೋಸ್ಟ್ ನಡುವಿನ ಹರಹಳ್ಳಿಕೊಪ್ಪಲು ಬಳಿ ಪ್ರಮುಖ ರಸ್ತೆ ಮುಳುಗಡೆಯಾಗಿದೆ.
ಹರಹಳ್ಳಿ ಕೊಪ್ಪಲಿನ ಸರ್ಕಾರಿ ಶಾಲೆ ಸಂಪೂರ್ಣ ಮುಳುಗಡೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೂಡಲೇ ರಕ್ಷಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.