ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕೋತಿಗಳು ಕಿರಿಕಿರಿ ಉಂಟು ಮಾಡುತ್ತಿದೆ. ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಮೈಸೂರಿಗೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದು, ಇದಕ್ಕೂ ಮೊದಲು ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಭದ್ರತಾ ದೃಷ್ಟಿಯಿಂದ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಇಲ್ಲಿ ನೇಮಕ ಮಾಡಲಾಗಿತ್ತು. ಈ ವೇಳೆ ಇದ್ಯಾವುದಕ್ಕೂ ಕ್ಯಾರೆ ಅನ್ನದೇ ಕೋತಿಗಳು ಅತ್ತಿಂದಿತ್ತ ಓಡಾಡುತ್ತಿದ್ದವು.
ಇನ್ನು, ಇದೇ ವೇಳೆ ದೇವಾಲಯದ ಒಳಭಾಗದಲ್ಲಿ ಹೋಮ- ಹವನ ಮಾಡಿ ಬಳಿಕ ಉಳಿದ ವಸ್ತುಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಸಿದ್ದರು. ಈ ವೇಳೆ, ಕೋತಿಯೊಂದು ಬುಟ್ಟಿಯಲ್ಲಿದ್ದ ವಸ್ತುಗಳನ್ನು ಕೆದಕಿ ಬಾಳೆಹಣ್ಣನ್ನು ತಿನ್ನುತ್ತಿದ್ದ ದೃಶ್ಯ ಕಂಡು ಬಂತು.
ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಭಕ್ತರು ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಾರೆ. ದೇವಾಲಯದಲ್ಲಿ ಆವರಣದಲ್ಲಿ ಕೋತಿಗಳಿದ್ದು, ಕೆಲ ಭಕ್ತರು ಈ ಕೋತಿಗಳಿಗೆ ಹಣ್ಣು ಕಾಯಿ, ಪ್ರಸಾದ ಮುಂತಾದವುಗಳನ್ನು ನೀಡುತ್ತಾರೆ.