ಮೈಸೂರು: ರಾಜ್ಯಕ್ಕೆ ಜನರ ಕಷ್ಟ ಕೇಳಲು ಮೋದಿ ಯಾವತ್ತೂ ಬರಲಿಲ್ಲ. ಆದರೆ, ಈಗ ಪದೇ ಪದೆ ರಾಜ್ಯಕ್ಕೆ ಬರುತ್ತಿದ್ದಾರೆ. ಮೋದಿ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ಏನು ಪ್ರಯೋಜನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ಹೇಳಿದ್ದಾರೆ. ನಗರದ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ದಿನ. ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ದಿನ ಇಂದು. ಇಂತಹ ದಿನದಂದು ನಾವು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯಿಂದ ಬಾಳಬೇಕಾಗಿದ್ದು ಅವಶ್ಯಕವಾಗಿದೆ ಎಂದು ಹೇಳಿದರು.
ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಿದ್ಧಾಂತ ಹಾಗೂ ಸಂವಿಧಾನದಿಂದ ಪ್ರೇರಣೆ ಪಡೆದಿವೆ. ಹೀಗಾಗಿ ನಮ್ಮ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನವಾಗಿದ್ದು, ಇತ್ತೀಚೆಗೆ ಅದರ ವಿರುದ್ಧ ಸಂಚು ನಡೆಸುತ್ತಿರುವ ಕೋಮು ಶಕ್ತಿಗಳನ್ನು ದೂರ ಇಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಫೆಬ್ರವರಿ 3 ರಿಂದ ಮತ್ತೊಂದು ಸುತ್ತಿನ ಪ್ರವಾಸ:ಪ್ರಜಾಧ್ವನಿ ಕಾರ್ಯಕ್ರಮ ಮುಗಿದ ನಂತರ, ಮುಂದಿನ ತಿಂಗಳ ಫೆಬ್ರವರಿ 3 ರಿಂದ ಕಾಂಗ್ರೆಸ್ ನಾಯಕರ ಮತ್ತೊಂದು ಸುತ್ತಿನ ಪ್ರವಾಸ ನಡೆಯಲಿದೆ. ಇದರಲ್ಲಿ ನಾನು ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ ಮಾಡಲಿದ್ದೇವೆ. ಉತ್ತರ ಕರ್ನಾಟಕ ಭಾಗದಿಂದ ಸಿದ್ದರಾಮಯ್ಯ ಪ್ರವಾಸ ಮಾಡಲಿದ್ದು, ದಕ್ಷಿಣ ಕರ್ನಾಟಕ ಭಾಗದಿಂದ ನಾನು ಪ್ರವಾಸ ಮಾಡುತ್ತೇನೆ. ಇದು ಮುಗಿದ ಬಳಿಕ ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋಗುತ್ತೇನೆ. ಸಿದ್ದರಾಮಯ್ಯ ದಕ್ಷಿಣ ಕರ್ನಾಟಕದ ಭಾಗಕ್ಕೆ ಬರುತ್ತಾರೆ ಎಂದು ಹೇಳಿದರು.