ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ಉದ್ಘಾಟಿಸಲಿದ್ದಾರೆ. ಆದರೆ ಇನ್ನು ಅಂತಿಮವಾಗಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಗೆ ಎರಡು ಕಡೆಯಿಂದ 250 ರೂ. ಟೋಲ್ ಶುಲ್ಕ ನಿಗದಿ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಕಿ.ಮೀಗೆ ಇಂತಿಷ್ಟು ಅಂತ ಟೋಲ್ ಅಂದಾಜು ಮಾಡುತ್ತಾರೆ. ಮೇಲ್ಸೇತುವೆಗಳಿಗೆ ಟೋಲ್ ಜಾಸ್ತಿ ಇರುತ್ತೆ, ಕುಂಬಳಗೋಡು, ಮದ್ದೂರಿನಲ್ಲಿ ಫ್ಲೈ ಓವರ್ ಇದೆ.
ಮೊದಲ ಹಂತದಲ್ಲಿ ಬೆಂಗಳೂರು - ನಿಡಘಟ್ಟ ನಡುವೆ ಟೋಲ್ ಶುರುವಾಗಿದೆ. 135 ರೂ. ಟೋಲ್ ಶುಲ್ಕ ವಿಧಿಸಬೇಕೆಂದು ಶಿಫಾರಸು ಮಾಡಲಾಗಿದ್ದು ಫೈನಲ್ ಆಗಿಲ್ಲ, ಮೈಸೂರು ಬೆಂಗಳೂರು ಹೆದ್ದಾರಿ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಯುತ್ತೆ. ಬಳಿಕ ಎರಡೂ ಕಡೆ ಸೇರಿ 250 ರೂ. ಟೋಲ್ ಶುಲ್ಕ ಹಾಕಬಹುದು ಎಂದರು. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ.