ಮೈಸೂರು : ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯೋಗ ನಗರಿಯಲ್ಲಿ ಹಲವಾರು ನಿರೀಕ್ಷೆಗಳು ಗರಿಗೆದರಿವೆ. ಜೂನ್ 21ರಂದು ಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ಸೇರಿ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿ ಜೊತೆಗೆ ವಿಶ್ವದ ಯೋಗ ಪ್ರಿಯರನ್ನು ಯೋಗ ನಗರಿಯತ್ತ ಸೆಳೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ನಿರೀಕ್ಷೆಗಳೇನು?:ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಪ್ರವಾಸೋದ್ಯಮವನ್ನ ನಂಬಿರುವ ಹಲವು ಉದ್ಯಮಗಳು ಚೇತರಿಕೆ ಕಾಣಲಿವೆ. 2014ರಲ್ಲಿ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆಯಲ್ಲಿ ಮೈಸೂರಿನ ಪ್ರವಾಸೋದ್ಯಮವನ್ನ ಪ್ಯಾರೀಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಬಗ್ಗೆ ಮಾತನಾಡಿದ್ದರು.
ಈಗ ಅದು ವಿಶೇಷ ಪ್ಯಾಕೇಜ್ ರೂಪದಲ್ಲಿ ಕಾರ್ಯ ರೂಪಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ. ಇದರ ಜೊತೆಗೆ ಪ್ರವಾಸಿ ತಾಣಗಳ ಅಭಿವೃದ್ಧಿಯು ಆಗಲಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ನೆಲಕಚ್ಚಿದ್ದ ಪ್ರವಾಸೋದ್ಯಮಕ್ಕೆ ಮೋದಿಯವರ ಭೇಟಿ ಚೇತರಿಕೆ ನೀಡಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಅತಿ ಹೆಚ್ಚು ಯೋಗ ಕಲಿಕಾ ಕೇಂದ್ರಗಳಿರುವ ನಗರ : ಸಾಂಸ್ಕೃತಿಕ ನಗರಿ, ಪ್ರವಾಸಿಗರ ನಗರಿ, ಅರಮನೆಗಳ ನಗರಿ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಮೈಸೂರು, ವಿಶ್ವದಲ್ಲೆ ಯೋಗ ನಗರಿ ಎಂಬ ಖ್ಯಾತಿಯನ್ನು ಪಡೆದಿದೆ. ಮೈಸೂರಿನ ವಿವಿಧ ಭಾಗದಲ್ಲಿ ಸುಮಾರು 200 ಯೋಗ ಕಲಿಕಾ ಕೇಂದ್ರಗಳಿದ್ದು, ಪ್ರತಿ ವರ್ಷ 5000ಕ್ಕೂ ಹೆಚ್ಚು ವಿದೇಶಿಗರು ಯೋಗ ಕಲಿಯಲು ಮೈಸೂರಿಗೆ ಆಗಮಿಸುತ್ತಾರೆ. ಇದರ ಜೊತೆಗೆ 20,000ಕ್ಕೂ ಹೆಚ್ಚು ಜನ ಆನ್‌ಲೈನ್‌ನಲ್ಲಿ ಯೋಗ ಕಲಿಯುತ್ತಾರೆ. ಯೋಗ ಕಲಿಯಲು ವಿದೇಶಿಗರ ನೆಚ್ಚಿನ ತಾಣ ಮೈಸೂರು ಎನ್ನಬಹುದಾಗಿದೆ.
ಸಾಂಸ್ಕೃತಿಕ ನಗರಿಯಲ್ಲಿನ ಯೋಗ ಕೇಂದ್ರಗಳು : ಮೈಸೂರಿನಲ್ಲಿ ವಿವಿಧ ಬಡಾವಣೆಗಳಲ್ಲಿ ಸ್ಥಳೀಯವಾಗಿ ಸಹ ಯೋಗ ಕೇಂದ್ರಗಳಿದ್ದು ಸುಮಾರು 20,000 ಮಂದಿ ಸ್ಥಳೀಯರು ಪ್ರತಿ ದಿನ ಯೋಗ ಮಾಡುತ್ತಾರೆ. ಮೈಸೂರಿನ ಪತಂಜಲಿ ಯೋಗ ಸಮಿತಿ, ಬಾಬಾ ರಾಮ್ ದೇವ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಸಿದ್ದಿ ಸಮಾಧಿ ಯೋಗ, ಆರ್ಟ್ ಆಫ್ ಲೀವಿಂಗ್, ಮೈಸೂರು ಯೋಗ ಒಕ್ಕೂಟ, ಯೋಗ ಭಾರತಿ. ಜೆಎಸ್ಎಸ್ ಯೋಗ,ಈಶ್ವರಿ ವಿದ್ಯಾಲಯ, ಈಶ ಪೌಂಡೇಶನ್ ಸೇರಿದಂತೆ ಹಲವು ಯೋಗ ಕೇಂದ್ರಗಳು ಮೈಸೂರಿನಲ್ಲಿವೆ. ಇವು ಸ್ಥಳೀಯ ಜನರಿಗೆ ಯೋಗಾಭ್ಯಾಸ ಮಾಡಿಸುತ್ತವೆ. ಇದರ ಜೊತೆಗೆ ಗೋಕುಲಂನಲ್ಲಿ 15ಕ್ಕೂ ಹೆಚ್ಚು ಯೋಗ ಕೇಂದ್ರಗಳಿದ್ದು, ವಿದೇಶಿಗರಿಗೆ ಯೋಗ ತರಬೇತಿ ನೀಡಲಾಗುತ್ತಿದೆ.
ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಮನವಿ : ಮೈಸೂರಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳು ವಿದೇಶದಿಂದ ವಾಪಸ್ ಆದ ಮೇಲೆ ಮೈಸೂರಿನ ಸ್ಥಳೀಯ ಶಾಸಕರ ನಿಯೋಗವನ್ನು ಕರೆದುಕೊಂಡು ಹೋಗಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ. ಪ್ರಧಾನಿ ಆಗಮನ ಈ ಭಾಗಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸದರ ಪ್ರಯತ್ನದ ಫಲ :ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಕಳೆದ ತಿಂಗಳು ಪ್ರಧಾನಿಯವರನ್ನು ಭೇಟಿ ಮಾಡಿ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಆಗಮಿಸುವಂತೆ ಮನವಿ ಮಾಡಿದ್ದರು. ಅವರ ಮನವಿ ಹಾಗೂ ಸಾಂಸ್ಕೃತಿಕ ನಗರಿಯ ಮೇಲೆ ಪ್ರಧಾನಿಗಿರುವ ಕಳಕಳಿಯಿಂದ ಈ ಬಾರಿ ಮೈಸೂರಿಗೆ ಬರಲು ಪ್ರಧಾನಿ ಒಪ್ಪಿದ್ದು,ಅವರ ಆಗಮನದಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗ ಪಡೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಓದಿ :ದಕ್ಷಿಣ ಪದವೀಧರ ಚುನಾವಣೆಯ ಸಭೆಯಲ್ಲಿ ಗಲಾಟೆ : ವಿಡಿಯೋ ವೈರಲ್