ಮೈಸೂರು: ಬಸ್ ನಿಲ್ದಾಣದ ಶೆಲ್ಟರ್ ವಿವಾದದ ಕೇಂದ್ರಬಿಂದುವಾಗಿದ್ದು, ರಾಜ್ಯಾದ್ಯಂತ ಹೆಚ್ಚು ಚರ್ಚಿತ ವಿಷಯವಾಗಿದೆ. ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಬಸ್ ತಂಗುದಾಣದ ಶೆಲ್ಟರ್ ಮೇಲೆ ಇದೀಗ ಪ್ರಧಾನಿ ನರೇಂದ್ರ ಮೋದಿ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಕಲಾಗಿದೆ. ಈ ಹಿನ್ನೆಲೆ ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬೆಂಗಳೂರು-ಊಟಿ ರಸ್ತೆಯ ಜೆ.ಎಸ್. ಎಸ್ ಕಾಲೇಜು ಬಳಿ ನಿರ್ಮಿಸಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗ್ತಿದೆ. ಹಾಗಾಗಿ, ಬಸ್ ಶೆಲ್ಟರ್ ಮೇಲಿನ ಗುಂಬಜ್ ತೆರವು ಮಾಡಬೇಕು, ಇಲ್ಲದಿದ್ದರೆ ನಾನೇ ತೆರವು ಮಾಡುತ್ತೇನೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್, ಮೈಸೂರು ನಗರದ ಪಾರಂಪರಿಕ ಮಹತ್ವದ ಹಿನ್ನೆಲೆಯಲ್ಲಿ ತಂಗುದಾಣ ವಿನ್ಯಾಸಗೊಳಿಸಲಾಗಿದೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲಲ್ಲ. ಇದನ್ನು ಮುಸ್ಲಿಂ ಗುತ್ತಿಗೆದಾರ ನಿರ್ಮಿಸಿದ್ದಾರೆ ಎಂಬುದು ಸುಳ್ಳು ಎಂದು ಹೇಳಿದ್ದರು.
ಮೈಸೂರು ಬಸ್ ನಿಲ್ದಾಣದ ಬಳಿ ಪೊಲೀಸ್ ಬಿಗಿ ಭದ್ರತೆ ಇದನ್ನೂ ಓದಿ:ಬಸ್ ನಿಲ್ದಾಣದ ಮೇಲಿನ ಗುಂಬಜ್ ತೆರವು ಶತಸಿದ್ಧ: ಪ್ರತಾಪಸಿಂಹ
ವಿವಾದ ಭುಗಿಲೇಳುತ್ತಿದ್ದಂತೆ ಮಂಗಳವಾರ ರಾತ್ರೋರಾತ್ರಿ ಬೊಮ್ಮಾಯಿ, ಸುತ್ತೂರು ಶ್ರೀ ಫೋಟೋ ಹಾಕಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಜೊತೆಗೆ ಬಸ್ ತಂಗುದಾಣಕ್ಕೆ ಮೈಸೂರು ನಗರ ನೂತನ ಪೊಲೀಸ್ ಆಯುಕ್ತ ಬಿ. ರಮೇಶ್, ಮೈಸೂರು ನಗರ ಡಿಸಿಪಿ ಪ್ರದೀಪ್ ಗುಂಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕೆಆರ್‌ಐಡಿಎಲ್ ಕಾಮಗಾರಿ ತಡೆ ಹಿಡಿದಿದ್ದು, ಮುಂದಿನ ಆದೇಶದವರೆಗೂ ಯಾವುದೇ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕೆಲಸಗಾರರನ್ನು ಸ್ಥಳದಿಂದ ವಾಪಸ್ ಕಳಿಸಿದ್ದಾರೆ.
ಮಹಾನಗರ ಪಾಲಿಕೆಗೆ ನೋಟಿಸ್..ಗುಂಬಜ್ ಮಾದರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮತಿ ಇಲ್ಲದೇ ನಿರ್ಮಿಸಿರುವ ಈ ಬಸ್ ತಂಗುದಾಣ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದ್ದಾರೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಮುಂಭಾಗ ನಿರ್ಮಿಸುತ್ತಿರುವ ನೂತನ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವು ಮಾಡುವಂತೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದಿಂದ ಪಾಲಿಕೆ ಆಯುಕ್ತರು ಮತ್ತು ಕೆಆರ್‌ಐಡಿಎಲ್ ಎಂಜಿನಿಯರ್‌ಗೆ ನೋಟಿಸ್ ನೀಡಲಾಗಿದೆ.
ಶಾಸಕ ಎಸ್.ಎ. ರಾಮದಾಸ್ ಅವರು ನೀಡಿರುವ 10 ಲಕ್ಷ ರೂ. ಅನುದಾನದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿತ್ತು.
ಇದನ್ನೂ ಓದಿ:ಗುಂಬಜ್ ಯಾವುದೇ ಧರ್ಮದ ಆಧಾರದ ವಿನ್ಯಾಸವಲ್ಲ, ಗುತ್ತಿಗೆದಾರ ಮುಸ್ಲಿಂನಲ್ಲ: ಬಿಜೆಪಿ ಶಾಸಕ ರಾಮದಾಸ್ ಸ್ಪಷ್ಟನೆ