ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡoಡ ಕಾರ್ಯಪ್ಪ ಅಲ್ಲ. ಆತ ಅಡ್ನಾಡಿ ಕಾರ್ಯಪ್ಪ. ಆತ ಟಿಪ್ಪುವಿನ ಬಗ್ಗೆ ಪುಸ್ತಕ ಬರೆಯಲು ಟಿಪ್ಪು ಕಾಲದಲ್ಲಿ ಹುಟ್ಟಿದ್ದನಾ? ಅವನು ಬರೆದಿರುವ ಟಿಪ್ಪು ಪುಸ್ತಕ 'ಟಿಪ್ಪು ನಿಜ ಕನಸು'ಗಳನ್ನು ನಾನು ಖಂಡಿಸುತ್ತೇನೆ ಎಂದು ಏಕ ವಚನದಲ್ಲೇ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಎಂಎಲ್ಸಿ ವಿಶ್ವನಾಥ್ ಅವರು ಮಾತನಾಡಿದರು ಇಂದು ಟಿಪ್ಪು ಕನ್ನಡ ವೇದಿಕೆಯ ವತಿಯಿಂದ ಟಿಪ್ಪು ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಜಯಂತಿಯ ಕಾರ್ಯಕ್ರಮದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿ, ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಸ್ವಾಭಿಮಾನದ ಸಂಕೇತವಾಗಿದೆ.
ಆತ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಇತಿಹಾಸವನ್ನು ತಿರುಚುವ ಕೆಲಸ ಯಾರು ಮಾಡಬಾರದು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಆಡಳಿತ, ಧೈರ್ಯ, ಶೌರ್ಯ, ಕೆಚ್ಚೆದೆಯ ಹೋರಾಟಗಳನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದರು. ಟಿಪ್ಪು 80 ಸಾವಿರ ಜನರನ್ನು ಕೊಂದ, 40 ಸಾವಿರ ಜನರನ್ನು ಮತಾಂತರ ಮಾಡಿದ ಎಂಬುದು ಕಥೆಯಷ್ಟೇ. ಏಕೆಂದರೆ ಅಂದಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು ತಾಳೆ ಆಗುವುದು ಇಲ್ಲ. ಟಿಪ್ಪುವಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದವರು ಏನೇನೋ ಅಪಪ್ರಚಾರ ಮಾಡುತ್ತಾರೆ ಎಂದು ಟೀಕಿಸಿದರು.
ರಂಗಾಯಣ ನಿರ್ದೇಶಕ ಅಡ್ಡoಡ ಕಾರ್ಯಪ್ಪ ವಿರುದ್ಧ ಆಕ್ರೋಶ:ಟಿಪ್ಪು ಸುಲ್ತಾನ್ ಶತ್ರುಗಳ ವಿರುದ್ಧ ಮಂಡಿಯೂರದ ಏಕೈಕ ಸುಲ್ತಾನ. ಟಿಪ್ಪುವನ್ನು ಟಿಪ್ಪು ಎಂದು ಕರೆಯಲು ಯಾವ ಪಕ್ಷವಾದರೇನು?. ನಾನು ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾದರೂ ನಾನು ಯಾವಾಗಲೂ ಟಿಪ್ಪು ಸ್ವಾಭಿಮಾನಿ ಕನ್ನಡಿಗ, ಮೈಸೂರು ಹುಲಿ. ಜಾತಿ ಧರ್ಮ ಪಕ್ಷವನ್ನು ಮೀರಿದ ವ್ಯಕ್ತಿತ್ವ. ಚರಿತ್ರೆಯನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಯಾರು ಏನೇ ಹೇಳಿದರೂ ಚರಿತ್ರೆ ಬದಲಾಗುವುದಿಲ್ಲ.
ಮೈಸೂರಿನ ಸಂಸದ ಪ್ರತಾಪ್ ಸಿಂಹ ಟಿಪ್ಪು ಸುಲ್ತಾನ್ 80 ಸಾವಿರ ಕೊಡವರನ್ನು ಹತ್ಯೆ ಮಾಡಿದ ಎಂದು ಹೇಳುತ್ತಾನೆ. ಅಂದು ಮೈಸೂರು ಸಾಮ್ರಾಜ್ಯದಲ್ಲಿ ಎಷ್ಟು ಜನಸಂಖ್ಯೆಯಿತ್ತು ಎಂಬ ಸಾಮಾನ್ಯ ಜ್ಞಾನವೂ ಸಂಸದನಿಗಿಲ್ಲ ಎಂದು ಟೀಕಿಸಿದರು.
ಇನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡoಡ ಕಾರ್ಯಪ್ಪ, ಆತ ಅಡ್ಡoಡ ಕಾರ್ಯಪ್ಪ ಅಲ್ಲ. ಅವನೊಬ್ಬ ಅಡ್ನಾಡಿ ಕಾರ್ಯಪ್ಪ. ಅವನೇನು ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಬರೆಯುವುದು. ಟಿಪ್ಪು ಕಾಲದಲ್ಲಿ ಈತ ಹುಟ್ಟಿದ್ದನಾ? ಆತ ಬರೆದ ಟಿಪ್ಪು ನಿಜ ಕನಸು ನಾಟಕವನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಓದಿ:ಶಾಲಾ ಶ್ರೇಯೋಭಿವೃದ್ಧಿಗೆ ಹಣ ಸಂಗ್ರಹ.. ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಹೆಚ್ ವಿಶ್ವನಾಥ್ ಆಗ್ರಹ