ಮೈಸೂರು: ಬೈಕ್ ಸವಾರನನ್ನ ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ?. ನೀನು ಯಾವ್ ಸೀಮೆ ಕಮಿಷನರಯ್ಯ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ರಿಂಗ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕಲ್ಲ. ಎಷ್ಟು ವರ್ಷವಾಯ್ತು ಇಲ್ಲಿಗೆ ಬಂದು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೈಕ್ ಸಾವರ ಸಾವು ಪ್ರಕರಣ : ಕರ್ತವ್ಯನಿರತ ಪೊಲೀಸರಿಗೆ ಆಯುಕ್ತರಿಂದ ಪ್ರಶಂಸನಾ ಪತ್ರ
ಎಷ್ಟು ಜನ ಡಿಸಿಪಿ, ಎಸಿಪಿಗಳಿದ್ದೀರಿ. ಎಲ್ರೂ ಏನ್ ಮಾಡ್ತಿದ್ದೀರಿ. ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ. ಜನಪ್ರತಿನಿಧಿಗಳು, ಜನರ ಬಗ್ಗೆ ಗೌರವ ಇಲ್ಲ. ಸದನದಲ್ಲಿ ಚರ್ಚೆಯೂ ಆಗಿಲ್ಲ. ಅಧಿವೇಶನದಲ್ಲಿ ಸಿಡಿ ಹಿಡ್ಕೊಂಡು ವಿಷ್ಣು ಚಕ್ರ ತಿರುಗಿಸಿದ್ದಾರೆ ಅಷ್ಟೇ ಎಂದು ಹೇಳುವ ಮೂಲಕ ಮೈಸೂರಿನಲ್ಲಿ ನಡೆದ ಘಟನೆಯನ್ನು ಖಂಡಿಸಿದರು.
ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಇದು ಪೊಲೀಸರ ಅಚಾತುರ್ಯದಿಂದ ನಡೆದ ಘಟನೆ. ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ. ಓಡಿಸಿಕೊಂಡು ಬೈಕ್ ಹಿಡಿ ಅಂತ ಹೇಳುತ್ತಾ. ಸರ್ಕಾರದ ದುಡ್ಡಲ್ಲಿ ಕ್ಯಾಮರಾ, ಉಪಕರಣಗಳನ್ನ ಕೊಟ್ಟಿದ್ದೀವಿ. ಈ ವರ್ತನೆಯನ್ನ ಯಾರೂ ಕ್ಷಮಿಸಲ್ಲ. ಪೊಲೀಸರು ಸುದ್ದಿ ಕೊಟ್ಟರೆ ಅಲ್ವೆ ಗೃಹ ಸಚಿವರು ಮಾತನಾಡೋದು. ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಹಿಡಿಯೋದನ್ನ ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮರಾ, ಸಿಸಿ ಕ್ಯಾಮರಾ ಮೂಲಕ ತಪಾಸಣೆ ಮಾಡಿ ಎಂದು ವಿಶ್ವನಾಥ್ ಹೇಳಿದರು.
ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಜೊತೆ ಮಾತನಾಡ್ತೀನಿ. ಪೊಲೀಸ್ ವ್ಯವಸ್ಥೆ ಸುಧಾರಣೆಯಾಗಬೇಕಿದೆ ಎಂದು ಹೇಳಿದ್ರು.