ಮೈಸೂರು:ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಮುಂದಿನ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಗುಣಾತ್ಮಕ ಪರೀಕ್ಷೆಯ ಹೆಸರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ಹೊರಹಾಕಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ತಾಲೂಕಿನಲ್ಲಿ ಪ್ರಸ್ತುತ ಅಂದಾಜು 15-18 ಪರೀಕ್ಷಾ ಕೇಂದ್ರಗಳಿರುವಲ್ಲಿ ಅದನ್ನು 5 ರಿಂದ 7 ಪರೀಕ್ಷಾ ಕೇಂದ್ರಗಳನ್ನಾಗಿ ಪರಿವರ್ತಿಸಿ, ಒಂದು ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 800 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದರು.
ಈ ರೀತಿ ಶಿಕ್ಷಕರನ್ನು ಅಪಮಾನಗೊಳಿಸುವುದು ಅತ್ಯಂತ ಖಂಡನೀಯ, ಕನಿಷ್ಠ 5 ರಿಂದ 8 ಕಿಮೀ ದೂರದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ಇರುವ ತೊಂದರೆಗಳನ್ನು ಗಮನಿಸದೇ ಇರುವುದು ಅತ್ಯಂತ ಶೋಚನೀಯ ಸಂಗತಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪರೀಕ್ಷೆ ಬರೆಯುಂತಾಗಲಿದೆ. ಈ ರೀತಿ ಬದಲಾವಣೆಯ ಚಿಂತನೆ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಆಗಲಿದೆ. ಈ ಎರಡೂ ನಿರ್ಧಾರ ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಅಕ್ರಮ ನಡೆಯುವ ಪರೀಕ್ಷಾ ಕೇಂದ್ರಗಳ ಬಗ್ಗೆ ಇಲಾಖೆಗೆ ಮಾಹಿತಿ ಇರುತ್ತದೆ. ಅಂತಹ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ದಕ್ಷ ಅಧಿಕಾರಿಗಳನ್ನು ನೇಮಿಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು, ಶಿಕ್ಷಕರನ್ನು ಸಂಶಯಾಸ್ಪದವಾಗಿ ನೋಡುವುದು, ಇಡೀ ಸಮಾಜವೇ ತಲೆತಗ್ಗಿಸುವಂತಾಗುತ್ತದೆ ಎಂದರು.