ಮೈಸೂರು : ಕಾಂಗ್ರೆಸ್ಗೆ ಮತ ನೀಡಿದರೆ ದಂಗೆ ಆಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರುವುದರಿಂದ ವಿಧಾನಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ಗೆ ಮತ ನೀಡಿದರೆ ದಂಗೆ ಆಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಈ ದೇಶದ ಗೃಹ ಮಂತ್ರಿಯಾಗಿದ್ದಾರೆ. ಆ ಹುದ್ದೆಯ ಘನತೆ ಅರಿತು ಮಾತನಾಡಬೇಕಿತ್ತು.ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಒಂದು ದೇಶದ ಗೃಹ ಸಚಿವರಾಗಿರುವ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡುತ್ತಿಲ್ಲ. ದೇಶದ 135 ಕೋಟಿ ಜನರ ಗೌರವ ಕಾಪಾಡಬೇಕಾದ ದೇಶದ ಗೃಹ ಮಂತ್ರಿ ದಂಗೆ ಎನ್ನುವ ಪದವನ್ನು ಉಪಯೋಗಿಸುತ್ತಾರೆ. ಇದು ಅವರಿಗೆ ಶೋಭೆ ತರುವುದಲ್ಲ. ಅಮಿತ್ ಶಾ ಅವರು ಜೈಲಿನಲ್ಲಿ ಇದ್ದು ಬಂದವರು. ಗೂಂಡಾಗಿರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕಿಲ್ಲ ಅಂದರೆ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಹೇಳುತ್ತಾರೆ. ನಮಗೆ ಮೋದಿಯವರ ಆಶೀರ್ವಾದಕ್ಕಿಂತ ಈ ನಾಡಿನ ಬಸವಣ್ಣನವರ ಆಶೀರ್ವಾದ ಇದೆ. ಅಂಬೇಡ್ಕರ್ ಅವರ ಆಶೀರ್ವಾದವಿದೆ. ಕುವೆಂಪು, ಕನಕದಾಸರ ಆಶೀರ್ವಾದ ಇದೆ. ಕಾಂಗ್ರೆಸ್ನವರು 90 ಸಲ ಬೈದಿದ್ದಾರೆ ಎಂದು ಹೇಳುವ ಮೂಲಕ ಸರ್ಕಾರದ ಖಜಾನೆಯ ಹಣವನ್ನು ಖರ್ಚು ಮಾಡಿ ಕರ್ನಾಟಕ್ಕೆ ಬರಬೇಕಾದ ಅವಶ್ಯಕತೆ ಇರಲಿಲ್ಲ ಪ್ರಧಾನಿ ಮೋದಿ ವಿರುದ್ಧವೂ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.