ಮೈಸೂರು:ರಾಜ್ಯದಲ್ಲಿ ಯಾವ ಮಂತ್ರಿ ಏನ್ ಮಾಡುತ್ತಿದ್ದಾರೆ ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಾಗುತ್ತಿಲ್ಲ. ಶಕ್ತಿ ಪೀಠವೇ ಮಸುಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಹೆಚ್ ವಿಶ್ವನಾಥ್ ಮಾಧ್ಯಮಗೋಷ್ಟಿ ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಹೆಚ್ ವಿಶ್ವನಾಥ್, ರಾಜ್ಯದಲ್ಲಿ ಕೊರೊನಾ ಕಡಿಮೆಯಾಗಿಲ್ಲ, ಡೆಲ್ಟಾ ವೈರಸ್ ಹರಡುತ್ತಿದೆ ಎಂದು ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ರು. ಮಕ್ಕಳು ಪರೀಕ್ಷೆಗೆ ಸಿದ್ಧರಿಲ್ಲ, ಪಾಠವು ಸರಿಯಾಗಿ ನಡೆದಿಲ್ಲ, ಮಕ್ಕಳಿಗೆ ಲಸಿಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಅಗತ್ಯತೆ ಬಗ್ಗೆ ಸರ್ಕಾರ ಹಾಗೂ ಸಚಿವರಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಎರಡೇ ದಿನ ಪರೀಕ್ಷೆ ಬರೆಯಬೇಕು ಎಂದರೇ ಹಳ್ಳಿ ಮಕ್ಕಳು ಹಾಗೂ ದಲಿತ ಮಕ್ಕಳಿಗೆ ತೊಂದರೆಯಾಗುತ್ತದೆ. ಇಂತಹ ಗ್ರಾಮೀಣ ಮಕ್ಕಳನ್ನು ದಮನ ಮಾಡುವ ಪರೀಕ್ಷೆ ಬೇಡ. ಈಗಾಗಲೇ ಖಾಸಗಿ ಕಾಲೇಜುಗಳು ಹಾಲ್ ಟಿಕೆಟ್ ಪಡೆಯಲು ಉಳಿದ ಫೀಸ್ ಅನ್ನು ಕಟ್ಟಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಹಳ್ಳಿ ಜನರಿಗೆ, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ತೊಂದರೆಯಾಗಿದ್ದು, ಕೂಡಲೇ SSLC ಪರೀಕ್ಷೆಯನ್ನು ರದ್ದು ಮಾಡಬೇಕು. ಈ ಸರ್ಕಾರದಲ್ಲಿ ಯಾವ ಸಚಿವರು ಏನ್ ಮಾಡುತ್ತಿದ್ದಾರೆ ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಾಗುತ್ತಿಲ್ಲ. ಶಕ್ತಿಪೀಠ ಮಸುಕಾಗಿದೆ ಕೂಡಲೇ ವಿಧಾನಸಭೆ ಅಧಿವೇಶನ ಕರೆಯಿರಿ ಎಂದು ಆಗ್ರಹಿಸಿದರು.
ಇನ್ನು ಶ್ರೀರಾಮುಲು ಆಪ್ತಸಹಾಯಕನ ಪ್ರಕರಣ ಕುರಿತು ಮತ್ತೊಂದು ದಿನ ಸುದೀರ್ಘವಾಗಿ ಮಾತನಾಡೋಣ ಎಂದು ಹೆಚ್ ವಿಶ್ವನಾಥ್ ಹೇಳಿದ್ರು.