ಮೈಸೂರು: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪ್ರೀತಿಸಿ ಮದುವೆಯಾಗುವ ಅಧಿಕಾರ ಇದೆ. ಅದನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ಲವ್ ಜಿಹಾದ್ ಹೆಸರಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಬಾರದು ಎಂದು ಲವ್ ಜಿಹಾದ್ ಬಗ್ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಯಾರಿಗೆ ಆದರೂ ಗೊತ್ತಿರುವಂತದ್ದು ಇದು ಸುಮ್ಮನೆ ಸಮುದಾಯಕ್ಕೆ ಟೆನ್ಷನ್ ಉಂಟು ಮಾಡುವುದು. ಕಾನೂನಿನಲ್ಲಿ 18 ವರ್ಷ ಮೇಲ್ಪಟ್ಟ ಯಾರೇ ಆದರೂ ತಾವು ಪ್ರೀತಿಸಿದವರನ್ನು ಮದುವೆಯಾಗುವ ಅಧಿಕಾರ, ಸ್ವಾತಂತ್ರ್ಯ ಇದೆ. ಅದನ್ನು ಮೊಟಕುಗೊಳಿಸುವುದಕ್ಕೆ ಸಾಧ್ಯವಿಲ್ಲ. ಲವ್ ಜಿಹಾದ್ ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಮಾಡುವುದು ಹಾಗಾಗಿ ಅದರ ವಿರುದ್ಧ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಅದರಲ್ಲಿ ತಪ್ಪು ಏನು ಇಲ್ಲ ಎಂದರು.
ಇನ್ನು ಎಸ್ಟಿ ವರ್ಗಕ್ಕೆ ಕುರುಬ ಜಾತಿಯನ್ನು ಸೇರಿಸುವುದಕ್ಕೆ ಸಿದ್ದರಾಮಯ್ಯ ವಿರೋಧಿಸುತ್ತಿದ್ದಾರೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಸ್ಟಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಅದು ರಾಜಕೀಯ ಪ್ರೇರಿತ ಇರಬಾರದು, ದುರುದ್ದೇಶವಾಗಿ ಇರಬಾರದು ಅಷ್ಟೇ. ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಎಂದು ಯಾವುದೇ ಹೋರಾಟ ಆಗಲಿ ಬೇಡಿಕೆ ಇಲ್ಲದಿದ್ದರು ಸೇರಿಸುವುದಕ್ಕೆ ಮುಖ್ಯಮಂತ್ರಿಗಳು ಹೊರಟಿದ್ದರು, ಅದೇ ರೀತಿ ಇದನ್ನು ಮಾಡಬಹುದು ಅದಕ್ಕೆ ಸಮಾವೇಶಗಳು ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
ಇನ್ನು ಶಿರಾದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ತಮ್ಮ ಸ್ನೇಹಿತ ರಾಜೇಶ್ ಗೌಡ ಅವರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ರಾಜೇಶ್ ಗೌಡ ಟಿಕೆಟ್ ಕೇಳಲು ಬಂದಾಗ ಮಾತ್ರ ಭೇಟಿಯಾಗಿದ್ದೆ ಆಮೇಲೆ ಭೇಟಿಯಾಗಿಲ್ಲ ಎಂದರು.
ಜಿಲ್ಲಾಧಿಕಾರಿಗಳ ಸಭೆಗೆ ಶಾಸಕರ ಅನುಮತಿ ಬೇಕಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ಉತ್ತರಿಸಿದ ಅವರು ಸಭೆಗಳನ್ನು ಮಾಡಬಹುದು ಆದರೆ ಒಂದು ಪ್ರೋಟೋಕಾಲ್ ಅಂತಾ ಇರುತ್ತೆ ಜನಸ್ಪಂದನ ಕಾರ್ಯಕ್ರಮ ಮಾಡಬೇಕಾಗಿರುವುದು ಎಂಎಲ್ಎಗಳು ಏಕೆಂದರೆ ಜನರು ಕೆಲಸ ಆಗಿಲ್ಲ ಅಂದ್ರೆ ಕೇಳೋದು ನಮ್ಮನ್ನು. ನಾವು ಅಧಿಕಾರಿಗಳನ್ನು ಕೇಳಿ ಕೆಲಸಗಳನ್ನು ಮಾಡಿಸಿಕೊಡಬೇಕು ಅಧಿಕಾರಗಳೇ ಮಾಡಬೇಕು ಅಂದ್ರೆ ಎಂಎಲ್ಎಗಳಿಗೆ ತಿಳಿಸಬೇಕು ಆದರೆ ಇವರು ಎಂಎಲ್ಎಗಳಿಗೂ ತಿಳಿಸುವುದಿಲ್ಲ ಹಾಗಾಗಿ ಜನಪ್ರತಿನಿಧಿಗಳ ಜೊತೆ ಸಂಪರ್ಕ ಮಾಡಿಕೊಂಡು ಕೆಲಸ ಮಾಡಬೇಕು. ಸಂಪೂರ್ಣವಾಗಿ ಜನಪ್ರತಿನಿಧಿಗಳನ್ನು ಕಡೆಗಣಿಸಿ ತಾವು ಮುಂದೆ ಹೋಗುತ್ತೀನಿ ಅಂದ್ರೆ ತಪ್ಪಾಗುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಪಕ್ಷ ಟೇಕ್ ಆಫ್ ಆಗಿಲ್ಲ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ, ಅದು ಹೆಂಗೆ ಹೇಳುತ್ತಾರೆ, ಡಿಕೆಶಿ ಅವರು ಅಧ್ಯಕ್ಷರಾದ ಮೇಲೆ ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ. ಎಷ್ಟೋ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀವಿ, ಕೊರೋನಾ ಸಂದರ್ಭದಲ್ಲಿ ಅತಿ ಹೆಚ್ಚು ಚುರುಕಾಗಿ ಕೆಲಸ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ನಾಯಕರು. ಬಿಜೆಪಿ ಅವರು ಸರ್ಕಾರದ ಹಣ ಉಪಯೋಗಿಸಿಕೊಂಡು ಪ್ರಚಾರ ಮಾಡಿಕೊಂಡರು ಅಷ್ಟೇ. ನಾವು ರೈತರ ಬೆಳೆ ತೆಗೆದುಕೊಂಡು ಫುಡ್ ಕಿಟ್ ಕೊಟ್ಟಿರುವುದು, ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದ್ದೀವಿ. ಡಿಕೆಶಿ ಬಂದ ಮೇಲೆ ಪಕ್ಷಕ್ಕೆ ಬಲ ಮತ್ತು ಉತ್ಸಾಹ ಬಂದಿದೆ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದೀವಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.