ಮೈಸೂರು : ಚುನಾವಣೆಗೋಸ್ಕರ ಪ್ರಾಧಿಕಾರ ಮಾಡುವುದು ಸರಿಯಲ್ಲ. ಅದು ಬಹಳ ಕೆಟ್ಟ ಟ್ರೆಂಡ್ ಆಗಬಹುದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ರಾಜ್ಯ ಸರ್ಕಾರ ಇತ್ತೀಚಿಗೆ ಘೋಷಿಸಿದ ಪ್ರಾಧಿಕಾರದ ಆದೇಶಗಳಿಗೆ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮರಾಠ ಹಾಗೂ ವೀರಶೈವ - ಲಿಂಗಾಯತ ಪ್ರಾಧಿಕಾರ ಮಾಡಿದ್ದಾರೆ. ಮುಂದೆ ಕ್ರಿಶ್ಚಿಯನ್ನರು, ಜೈನರು ಕೇಳುತ್ತಾರೆ. ವಿನಾ ಕಾರಣ ಎಲ್ಲದಕ್ಕೂ ಪ್ರಾಧಿಕಾರ ರಚನೆ ಮಾಡುವುದಕ್ಕೆ ಆಗುವುದಿಲ್ಲ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರಾಧಿಕಾರ ರಚಿಸಿಬೇಕೆ ವಿನಃ ಚುನಾವಣೆಗೋಸ್ಕರ ಪ್ರಾಧಿಕಾರ ಮಾಡುವುದು ಸರಿಯಲ್ಲ ಎಂದರು.
ನಗರಸಭೆ ಹಾಗೂ ಪುರಸಭೆ ಅಧ್ಯಕ್ಷರ - ಉಪಾಧ್ಯಕ್ಷರ ಆಯ್ಕೆ ಪಟ್ಟಿಗೆ ತಡೆ ನೀಡಿರುವುದು ಏಕೆ ಅನ್ನೋದು ಗೊತ್ತಿಲ್ಲ. ಈಗ ತಡೆ ನೀಡಬಾರದಿತ್ತು. ಈಗಾಗಲೇ ಎಲ್ಲ ಕಡೆ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ತಡೆ ನೀಡುವುದು ಸರಿಯಲ್ಲ ಎಂದು ತಡೆಗೆ ಅನುಮಾನ ವ್ಯಕ್ತಪಡಿಸಿದರು.