ಮೈಸೂರು: ರಂಗಾಯಣದ ನಿರ್ದೇಶಕರು ಬರೆದಿರುವ 'ಟಿಪ್ಪು ನಿಜ ಕನಸುಗಳು' ಕೃತಿ ಹಾಗೂ ನಾಟಕ ತಡೆಯಲು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವಿರ್ ಸೇಠ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಎನ್. ಆರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್, ರಂಗಾಯಣ ನಮ್ಮ ಯುವ ಕಲಾವಿದರಿಗೆ ಒಂದು ನೆಲೆಯಾಗಬೇಕಿರುವ ಸ್ಥಾನ. ಅಲ್ಲಿ ಅಧಿಕಾರ ದುರುಪಯೋಗ ಮಾಡಿ ಅವರ ಕಾರ್ಯಸೂಚಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಿರುವುದು ವಿಷಾದವಾಗಿದ್ದು, ನ. 13 ರಂದು ರಂಗಾಯಣದ ನಿರ್ದೇಶಕರು ಬರೆದಿರುವ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆಯಾಗಲಿದೆ. ಇದೆ ಪುಸ್ತಕ ಆಧಾರವಾಗಿ ನ. 20 ರಿಂದ ಟಿಪ್ಪು ನಿಜ ಕನಸುಗಳು ನಾಟಕದ ಪ್ರದರ್ಶನ ನಡೆಯಲಿದ್ದು, ಅದನ್ನು ತಡೆಯಲು ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.