ಮೈಸೂರು: ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ, ಪಕ್ಷದ ವರಿಷ್ಠರಿಗೆ ಲಿಖಿತ ರೂಪದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಇಂದು (ಮಂಗಳವಾರ) ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ರಾಜಕೀಯ ಮುಂದಿನ ನಿಲುವಿನ ಬಗ್ಗೆ ಮಾತನಾಡಿದ ಅವರು, ’’ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ತಿರ್ಮಾನ ಕೈಗೊಂಡಿರುವೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಕಳೆದ ಡಿಸೆಂಬರ್ನಲ್ಲಿಯೇ ಪಕ್ಷದ ವರಿಷ್ಠರಿಗೆ ಲಿಖಿತ ರೂಪದಲ್ಲಿ ತಿಳಿಸಿದ್ದೇನೆ. ನನ್ನ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಂಡಿಲ್ಲ. ಆದ್ದರಿಂದ ಮುಂಬರುವ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದೆ. ಆದರೆ, ಅವರು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ‘‘ ಎಂದು ತನ್ವಿರ್ ಸೇಠ್ ಹೇಳಿದ್ದಾರೆ.
ಕಾಂಗ್ರೆಸ್ ಅಧಿವೇಶನದಲ್ಲಿ ಭಾವಹಿಸಿದ್ದೆ:ಮೊನ್ನೆ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಹ ಭಾಗವಹಿಸಿದ್ದೆ. ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾದ ನಂತರ, ನನಗೆ ಮಾತನಾಡಲು ಕಷ್ಟವಾಗುತ್ತಿದ್ದು, ಇನ್ನೂ ಸಂಪೂರ್ಣ ಗುಣಮುಖನಾಗಿಲ್ಲ. ಆದ್ದರಿಂದ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ. ಆದರೆ, ಪಕ್ಷದ ಹೈಕಮಾಂಡ್ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅವರ ತೀರ್ಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ತನ್ವೀರ್ ಸೇಠ್ ವಿವರಿಸಿದರು.