ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಆದ್ದರಿಂದ ನಮ್ಮ ಸರ್ಕಾರಕ್ಕೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದರು. ಮೈಸೂರಿನಲ್ಲಿಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿದ್ದರೂ ರಾಜೀನಾಮೆ ನೀಡಿ ಜನರ ಬಳಿ ಹೋಗುವುದು ಎಷ್ಟರ ಮಟ್ಟಿಗೆ ಸರಿ? 2008ರಲ್ಲಿ ಆಪರೇಷನ್ ಕಮಲ ಎಂಬ ಕೆಟ್ಟ ಸಂಸ್ಕೃತಿಯನ್ನು ತಂದಿದ್ದೇ ಬಿಜೆಪಿಗರು. ಈ ವಿಚಾರಕ್ಕೆ ಅವರು ಹೆಚ್ಚಿನ ಮನ್ನಣೆ ನೀಡುವುದುಲ್ಲ ಎಂದು ಸೇಠ್ ಹೇಳಿದರು.
ರಾಜ್ಯದ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ. ಉತ್ತಮ ಆಡಳಿತ ನೀಡುವುದು ನಮ್ಮ ಕರ್ತವ್ಯ. ಪ್ರತಿಪಕ್ಷದ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಅಥವಾ ಆಡಳಿತ ಶಾಸಕರು ಮತ್ತ್ಯಾರನ್ನೋ ಭೇಟಿಯಾದಾಗ ಇಂತಹ ಊಹಾಪೋಹದ ಸುದ್ದಿಗಳು ಹರಿದಾಡುತ್ತವೆ. ಸಂಬಂಧಪಟ್ಟವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಆಪರೇಷನ್ ವಿಚಾರವನ್ನು ತಳ್ಳಿಹಾಕಿದರು.
ಬಿಜೆಪಿಗರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ಪ್ರತಿಪಕ್ಷದ ನಾಯಕರ ಆಯ್ಕೆಯನ್ನು ತುರ್ತಾಗಿ ಮಾಡಿಕೊಳ್ಳಲಿ. ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಯೋಗ್ಯವಾದ ಕೆಲಸ ಮಾಡಲಿ. ಅವರ ಮನೆಯನ್ನು ಅವರು ಸರಿಮಾಡದಿದ್ದರೆ ಇಂತಹ ಆಪರೇಷನ್ಗಳು ನಡೆಯುತ್ತವೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಮತ್ತಷ್ಟು ಕುಗ್ಗಿಸುವ ತಂತ್ರಗಾರಿಕೆ ಮಾಡುತ್ತಿದ್ದೆಯೇ ಎಂಬ ಪ್ರಶ್ನೆಗೆ, ಆಗಲೇ ಕುಗ್ಗಿರುವ ಪಕ್ಷಗಳನ್ನು ಮತ್ತಷ್ಟು ಕುಗ್ಗಿಸುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಅಂತಹ ಯಾವುದೇ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದರು.
ಕಾವೇರಿ ನೀರಿನ ವಿಚಾರ:ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ ತನ್ವೀರ್ ಸೇಠ್,ನಮ್ಮ ಸರ್ಕಾರ ಮಾತ್ರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ನೀರು ಬಿಡಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕಿದೆ. ಹಾಗಾಗಿ ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಬಿಜೆಪಿ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಆಗಸ್ಟ್ 23ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದೇನು ಮಾಡಬೇಕೆಂದು ತೀರ್ಮಾನಿಸಲಾಗುತ್ತದೆ. ಕಾವೇರಿ ವಿಚಾರ ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದರು.
ಸರ್ವ ಪಕ್ಷಗಳ ಸಭೆಗೆ ಆಹ್ವಾನ ಬಂದರೆ ನಾನು ಹೋಗುತ್ತೇನೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವಿಗೆ ನನ್ನ ಸಹಮತವಿದೆ. ರಾಷ್ಟ್ರೀಯ ಶಿಕ್ಷಣದ ನೀತಿಯ ಹೆಸರಿನಲ್ಲಿ ಶಿಕ್ಷಣದ ಕೇಸರೀಕರಣ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ರಾಜ್ಯಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡರೆ ತಪ್ಪಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಿಜೆಪಿಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ: ಮಾಜಿ ಸಚಿವ ಎಸ್.ಟಿ. ಸೋಮಶೇಖರ್