ಮೈಸೂರು: ಮನೀಶ್ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅಂತವರು ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ಯಾರೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಮನೀಶ್ ಮೌದ್ಗಿಲ್, ಮತ್ತೊಂದು ಕಡೆ ಎಂಎಲ್ಸಿ ಹೆಚ್. ವಿಶ್ವನಾಥ್ ಟೇಪ್ ಹಿಡಿದುಕೊಂಡು ಸರ್ವೇ ಮಾಡಲಿ. ಇವರ ಮಧ್ಯೆ ಸರ್ವೇ ಟೇಪ್ ಅನ್ನು ಮೇಲೆ ಎತ್ತಲು ರೋಹಿಣಿ ಸಿಂಧೂರಿ ಸಹಾಯ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಮನೀಶ್ ಮೌದ್ಗಿಲ್ಗೆ ಸಾ ರಾ ಮಹೇಶ್ ಪ್ರಶ್ನೆ
ನಾನು ಗೊಮ್ಮಟೇಶ್ವರ, ಆಂಜನೇಯನ ಭಕ್ತ. ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ಈಗಾಗಲೇ ಸರ್ವೇ ಆಗಿರುವ ಜಾಗವನ್ನು ಭೂ ಮಾಪನ ಇಲಾಖೆಯ ಆಯುಕ್ತ ಮನೀಶ್ ಮೌದ್ಗಿಲ್ ಮತ್ತೆ ಸರ್ವೇಗೆ ಆದೇಶ ಮಾಡಿರುವುದು ಸರಿಯಲ್ಲ. ಶಿಷ್ಯೆ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 8 ವರ್ಷದಿಂದ ಎಷ್ಟು ಗೋಮಾಳಗಳನ್ನು, ಸರ್ಕಾರಿ ಜಾಗಗಳನ್ನು ಒತ್ತುವರಿ ಸರ್ವೇ ಮಾಡಿದ್ದೀರಿ ಎಂದು ಮನೀಶ್ ಮೌದ್ಗಿಲ್ ಅವರಿಗೆ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದರು.