ಮೈಸೂರು:ವಿಧಾನಸಭೆಯ ಕಾಗದ ಪತ್ರಗಳ ಸಮಿತಿಯನ್ನು ಜಿಲ್ಲಾಧಿಕಾರಿಗಳು ಪ್ರೊಟೋಕಾಲ್ ಪ್ರಕಾರ ಸ್ವಾಗತಿಸದ ಬಗ್ಗೆ ಸ್ಪೀಕರ್ ಗಮನಕ್ಕೆ ತರಲಾಗುವುದೆಂದು ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ, ಶಾಸಕ ಸಾ.ರಾ.ಮಹೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಬಗ್ಗೆ ಅಸಮಾಧಾನಗೊಂಡ ಶಾಸಕ ಸಾ.ರಾ.ಮಹೇಶ್: ಕಾರಣ?
ವಿಧಾನಸಭೆಯ ಕಾಗದ ಪತ್ರಗಳ ಸಮಿತಿಯನ್ನು ಜಿಲ್ಲಾಧಿಕಾರಿಗಳು ಪ್ರೊಟೋಕಾಲ್ ಪ್ರಕಾರ ಸ್ವಾಗತಿಸದ ಬಗ್ಗೆ ಅಸಮಾಧಾನಗೊಂಡ ಶಾಸಕ ಸಾ.ರಾ.ಮಹೇಶ್, ಈ ಬಗ್ಗೆ ಸ್ಪೀಕರ್ ಗಮನಕ್ಕೆ ತರಲಾಗುವುದು ಎಂದರು.
ಇಂದು ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ವಿಧಾನಸಭೆಯ ಕಾಗದ ಪತ್ರಗಳ ಸಮಿತಿಯು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಿತಿಯ ಲೆಕ್ಕ ಪತ್ರಗಳ ಪರಿಶೀಲನೆಯನ್ನು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಾಗದ ಪತ್ರ ಸಮಿತಿಯ ಸದಸ್ಯರನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವಾಗತಿಸಬೇಕಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ಬೇಗ ಅನುಮತಿ ಪಡೆದು ಹೊರಟು ಹೋಗಿದ್ದಾರೆ. ಇದು ಪ್ರೊಟೋಕಾಲ್ ಉಲ್ಲಂಘನೆ ಎಂದು ಸಾ.ರಾ.ಮಹೇಶ್ ಹೇಳಿದರು.
ಜಿಲ್ಲಾಧಿಕಾರಿಗಳು ಕೋವಿಡ್ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ತಡವಾಗಿ ಬಂದಿದ್ದಾರೆ. ಕೆಲಸ ಇದೆ ಎಂದು ಬೇಗ ಹೊರಟು ಹೋದರು. ನಮ್ಮ ಸಮಿತಿ ಬರುವುದರ ಬಗ್ಗೆ ಒಂದು ವಾರದ ಮುಂಚೆ ತಿಳಿಸಿದ್ದೆವು. ಆದರೂ ಈ ರೀತಿ ಆಗಿದೆ. ಈ ಬಗ್ಗೆ ಸ್ಪೀಕರ್ ಗಮನಕ್ಕೆ ತರುತ್ತೇನೆ ಎಂದು ಮಹೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.