ಮೈಸೂರು: "ಮೀಟರ್ ಬಡ್ಡಿಯಿಂದ ಬೀದಿ ಬದಿ ವ್ಯಾಪಾರಿಗಳನ್ನು ಮುಕ್ತಗೊಳಿಸುವ ಉದ್ದೇಶದಿಂದ ಪೊಲೀಸರ ಸಹಕಾರದೊಂದಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಸ್ವನಿಧಿ ಯೋಜನೆಯನ್ನು ಪ್ರತಿಯೊಬ್ಬರಿಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಫೆ.20ರಿಂದ ಜಾರಿಗೆ ತರುತ್ತೇವೆ" ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಜಿಲ್ಲೆಯ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ನೋಂದಣಿ ಕಾರ್ಯ ನಡೆದಿದೆ. ಸಣ್ಣ ಸಣ್ಣ ವ್ಯಾಪಾರಿಗಳು, ತಳ್ಳುಗಾಡಿ, ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಈ ಕಾರ್ಯಕ್ರಮ ಯೋಜಿಸಲಾಗಿದೆ. ಫೆ.20ರಂದು ಬೆಳಗ್ಗೆ 11 ಗಂಟೆಗೆ ನಂಜುಮಳಿಗೆ ವೃತ್ತದಲ್ಲಿ ಸಂಸದ ಪ್ರತಾಪಸಿಂಹ ಕಾರ್ಯಕ್ರಮಕ್ಕೆ ಚಾಲನೆ ನೀಡುವರು" ಎಂದು ತಿಳಿಸಿದರು.
"10,205 ಅರ್ಜಿಗಳನ್ನು ಕ್ರೋಢೀಕರಿಸಿದ್ದು, 9,299 ಮಂಜೂರಾತಿ ದೊರಕಿದ್ದು, 8,983 ಅರ್ಜಿದಾರರಿಗೆ ಸಾಲ ವಿತರಣೆಯಾಗಿರುತ್ತದೆ. ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ನೆರವಿನೊಂದಿಗೆ ಈ ಯೋಜನೆ ಜಾರಿಯಾಗಿದ್ದು, ಈ ಸಂಬಂಧ ಈಗಾಗಲೇ 10,205 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇನ್ನೂ 6 ಸಾವಿರ ಜನರ ಆಯ್ಕೆ ಕಾರ್ಯ ಪ್ರಗತಿಯ ಹಂತದಲ್ಲಿದೆ. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಂದಾಳತ್ವದಲ್ಲಿ ಎಲ್ಲಾ ಬ್ಯಾಂಕುಗಳಲ್ಲೂ ಯೋಜನೆಗೆ ಪೂರಕವಾದ ನೆರವು ನೀಡುವ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಯೋಜನೆಯ ಮೂಲಕ ಮೊದಲ ಹಂತದಲ್ಲಿ 8,783 ಫಲಾನುಭವಿಗಳಿಗೆ ಬಡ್ಡಿರಹಿತವಾಗಿ ತಲಾ 10 ಸಾವಿರ ರೂ. ಮೂಲ ಬಂಡವಾಳ ಒದಗಿಸಲಾಗುತ್ತದೆ. ಇದರಿಂದಾಗಿ ಬೀದಿ ಬದಿ, ಸಣ್ಣ ಪುಟ್ಟ ವ್ಯಾಪಾರಿಗಳು ಬಡ್ಡಿ ಮತ್ತು ಮೀಟರ್ ಬಡ್ಡಿ ದಂಧೆಕೋರರಿಂದ ತೊಂದರೆ ಅನುಭವಿಸುವುದು ತಪ್ಪಲಿದೆ" ಎಂದರು.
ಇದನ್ನೂ ಓದಿ:ಚುನಾವಣಾ ಪೂರ್ವ ಬಜೆಟ್: ಬೊಮ್ಮಾಯಿ ಈಡೇರಿಸ್ತಾರಾ ಗಡಿಜಿಲ್ಲೆ ಜನರ ನಿರೀಕ್ಷೆ?
" ಈ ಯೋಜನೆ ಪಡೆದುಕೊಳ್ಳಲು ಕಾರ್ಡ್ ಹೊಂದಿರುವವರಿಗೆ ತಲಾ ಎರಡು ಲಕ್ಷ ರೂಪಾಯಿವರೆಗೆ ವಿಮಾ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತಿದೆ. ಜೀವನದ ಖಾತ್ರಿಗಾಗಿ ಯೋಜನೆಯೊಳಗೆ ಈ ಎಲ್ಲಾ ಅಂಶಗಳನ್ನು ಅಳವಡಿಸಲಾಗಿದೆ. ಸ್ವನಿಧಿ ಯೋಜನೆಯ ಜೊತೆಗೆ ಶ್ರಮ್ ಕಾರ್ಡ್ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 10 ಸಾವಿರ ಹಣಕಾಸು ನೆರವು ಪಡೆದವರಿಗೆ ಎರಡನೇ ಹಂತದಲ್ಲಿ 20 ಸಾವಿರ ರೂ. ಹಾಗೂ ನಂತರದಲ್ಲಿ 50 ಸಾವಿರ ರೂ. ನೀಡಲಾಗುವುದು. ಎಲ್ಲ ವ್ಯವಹಾರಗಳು ಬ್ಯಾಂಕ್ ಮುಖಾಂತರವೇ ನಡೆಯಲಿದ್ದು, ಮೋಸ, ಅನ್ಯಾಯಕ್ಕೆ ಅವಕಾಶವೇ ಇಲ್ಲವಾಗಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರ ಸಚಿವ ಭಗವದ್ ಕಿಶನ್ ರಾವ್ ಕಾರಡ್ ಚಾಲನೆ ನೀಡಲಿದ್ದಾರೆ" ಎಂದು ತಿಳಿಸಿದರು.