ಮೈಸೂರು:ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ತಮ್ಮಲ್ಲಿರುವ ದಾಖಲೆಯೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ. ಮಹೇಶ್ ಆರೋಪ ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೇ 1 ರಿಂದ 29 ರವರೆಗೆ ಮೈಸೂರು ಜಿಲ್ಲೆಯಲ್ಲಿ 969 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ಧಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಕ್ಕೆ ಲೆಕ್ಕ ತೋರಿಸಿದೆ. ಆದ್ರೆ 731 ಸಾವುಗಳ ಲೆಕ್ಕವನ್ನು ನೀಡಿಲ್ಲ. ಈ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹಾಗೂ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಪ್ಪು ಲೆಕ್ಕ ನೀಡುತ್ತಿದ್ದಾರೆ. ಈ ರೀತಿ ತಪ್ಪು ಲೆಕ್ಕ ನೀಡಿದರೆ ಸತ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಯಾವುದಾದರೂ ಆರ್ಥಿಕ ಸಹಾಯ ಮಾಡಿದರೆ ಆ ಕುಟುಂಬಗಳಿಗೆ ವಂಚನೆ ಮಾಡಿದಂತಾಗುತ್ತದೆ.
ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಮೈಸೂರು ಜಿಲ್ಲಾಧಿಕಾರಿ ವಿರುದ್ದ ರಾಜ್ಯಪಾಲರಿಗೆ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇನೆ. ಜೊತೆಗೆ ಮುಖ್ಯಮಂತ್ರಿಗಳಿಗೂ ದಾಖಲಾತಿಗಳನ್ನು ಕಳುಹಿಸಿ ಕೊಡುತ್ತೇನೆ. ಮೈಸೂರು ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದ್ದೇನೆ ಎಂದು ಪೋಸ್ ಕೊಡಲು ಈ ರೀತಿ ಲೆಕ್ಕ ಕೊಡುತ್ತಿದ್ದಾರೆ. ಇದಕ್ಕೆ ಐಎಎಸ್ ಯಾಕೆ ಬೇಕು?. ಎಸ್ಎಸ್ಎಲ್ಸಿ ಓದಿದವರು ಕೊಡಬಹುದಲ್ಲವೇ? ಎಂದು ಜಿಲ್ಲಾಧಿಕಾರಿ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:'ನನ್ನ ಗಮನ ಕೊರೊನಾ ನಿಯಂತ್ರಣ ಮಾತ್ರ' ಎನ್ನುತ್ತಾ ಪ್ರತಾಪ್ ಸಿಂಹಗೆ ಲೆಕ್ಕ ಕೊಟ್ಟ ಮೈಸೂರು ಡಿಸಿ ಸಿಂಧೂರಿ