ಲಾಬಿಯಲ್ಲಿ ನಂಬಿಕೆಯಿಲ್ಲ.. ನಾನು ಮೆರಿಟ್ ವಿದ್ಯಾರ್ಥಿ: ಶಾಸಕ ರಾಮದಾಸ್ - Ministers of Karnataka 2021
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಅವರು ರಾಜ್ಯದ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಸಚಿವ ಸ್ಥಾನಕ್ಕಾಗಿ ತಾನು ಲಾಬಿ ಮಾಡುವ ಮಾತೇ ಇಲ್ಲ ಎಂದು ಸ್ಷಷ್ಟಪಡಿಸಿದ್ದಾರೆ.
ಶಾಸಕ ರಾಮದಾಸ್
ಮೈಸೂರು:ಲಾಬಿಯಲ್ಲಿ ನಂಬಿಕೆ ಇಟ್ಟಿಲ್ಲ, ನಾನು ಮೆರಿಟ್ ವಿದ್ಯಾರ್ಥಿ ಎಂದು ಹೇಳುವ ಮೂಲಕ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನಗೆ ಯಾಕೆ ಸಚಿವ ಸ್ಥಾನ ಕೈ ತಪ್ಪಿತು ಎಂದು ಪೋಸ್ಟ್ ಮಾರ್ಟಂ ಮಾಡುವುದಿಲ್ಲ, ನನಗೆ ಹೆಣ ಕೊಯ್ಯುವುದರಲ್ಲಿ ಆಸಕ್ತಿಯಿಲ್ಲ. ಕೊನೆಕ್ಷಣದಲ್ಲಿ ನನ್ನ ಹೆಸರು ಕೈ ಬಿಡಲಾಗಿದೆ. ನನ್ನದು ಮಿಲಿಟರಿ ಜಾತಿ, ಜನಿವಾರ, ಮತ್ತೊಂದು ಚಿಂತೆ ಮಾಡುವವನಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಿರೀಕ್ಷೆ ಇದ್ದದ್ದು ನಿಜ.. ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇದ್ದದ್ದು ನಿಜ. ಆದರೆ, ಕೊನೆಕ್ಷಣದಲ್ಲಿ ಕೈತಪ್ಪಿದೆ ಎಂದು ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಇದು ದುಃಖದ ದಿನವಲ್ಲ, ಸವಾಲಿನ ದಿನ ಎಂದು ರಾಮದಾಸ್ ಹೇಳಿದ್ರು.
ಟ್ವೀಟ್ ಮೂಲಕ ವಿಶ್.. ಇದಕ್ಕೂ ಮುನ್ನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿರುವನೂತನ ಸಚಿವರಿಗೆ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. "ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು. ಕರ್ನಾಟಕವನ್ನು ದೇಶದಲ್ಲಿ ನಂ.1 ಮಾಡಲು ತಾವೆಲ್ಲ ಶ್ರಮಿಸುತ್ತೀರೆಂದು ನಂಬಿರುತ್ತೇನೆ. ತಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಶುಭವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
Last Updated : Aug 4, 2021, 2:28 PM IST