ಮೈಸೂರು: 'ಪ್ಲೀಸ್...ಪ್ಲೀಸ್ ಬಸ್ ನಿಲ್ದಾಣದ ವಿಚಾರ ಬಿಟ್ಟು ಬಿಡಿ. ಜನರ ಅಭಿವೃದ್ಧಿಯ ಗುರಿ ಮಟ್ಟಲು ಸಹಕಾರ ಕೊಡಿ' ಎಂದು ಮಾಧ್ಯಮವೂ ಸೇರಿ ಎಲ್ಲರನ್ನೂ ಕೇಳಿಕೊಳ್ಳುತ್ತೇನೆ ಎಂದು ತೀವ್ರ ವಿವಾದ ಹುಟ್ಟು ಹಾಕಿರುವ ಬಸ್ ನಿಲ್ದಾಣದ ವಿಚಾರವಾಗಿ ಶಾಸಕ ಎಸ್.ಎ ರಾಮದಾಸ್ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಸ್ ನಿಲ್ದಾಣದ ವಿಚಾರದಲ್ಲಿ ತಜ್ಞರ ಸಮಿತಿ ಬಂದು ಪರಿಶೀಲಿಸಿ ಅಂತಿಮ ನಿರ್ಣಯ ಕೈಗೊಳ್ಳುವಂತೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಸಿಎಂಗೆ ಮನವಿ ಮಾಡಿದ್ದೇನೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ. ಹಾಗೇನಾದರೂ ತೆರವು ಮಾಡಲು ಸೂಚಿಸಿದರೆ ಒಪ್ಪಿಕೊಂಡು ಕ್ಷಮೆ ಕೇಳುತ್ತೇನೆ. ನನ್ನ ಸಂಬಳದಿಂದ ಅದರ ವೆಚ್ಚ ಭರಿಸುತ್ತೇನೆ.
ಅನಗತ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಚಾರ ಹರಡಿದವರ ವಿರುದ್ಧವೂ ದೂರು ನೀಡಿದ್ದೇನೆ. ಜನರ ಅಭಿವೃದ್ಧಿ ಮಾಡಲು ಸಾಕಷ್ಟು ಆಲೋಚನೆ ಇಟ್ಟು ಮುನ್ನಡೆಯುತ್ತಿದ್ದೇನೆ. ಎಲ್ಲರೂ ಸಹಕರಿಸಿ. ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ದುಡಿಯುತ್ತಿದ್ದೇನೆ, ಎಲ್ಲರೂ ಹೀಗೆ ಬೇಸರದಿಂದ ಹೊರ ನಡೆದಿದ್ದು, ನಾನೊಬ್ಬನೇ ಉಳಿದಿದ್ದೇನೆ. ನನ್ನ ಪಾಡಿಗೆ ನನ್ನ ಕೆಲಸ ಮಾಡಲು ಬಿಡಿ ಎಂದು ಮನವಿ ಮಾಡಿದ್ದಾರೆ.
ಮೈಸೂರು ಬಸ್ ನಿಲ್ದಾಣ ವಿವಾದ: ಮೈಸೂರು ನಗರದಲ್ಲಿ ನಿರ್ಮಿಸಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ಬಸ್ ನಿಲ್ದಾಣದ ಮೇಲೆ ಬೊಮ್ಮಾಯಿ, ಸುತ್ತೂರು ಶ್ರೀ ಫೋಟೋ ಹಾಕಲಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ ರಾಮದಾಸ್ ಅವರೂ ಕೂಡ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ವಿವಾದಿತ ಬಸ್ ನಿಲ್ದಾಣದಲ್ಲಿ ಸುತ್ತೂರು ಶ್ರೀ, ಬೊಮ್ಮಾಯಿ, ಮೋದಿ ಫೋಟೋ.. ಪೊಲೀಸರಿಂದ ಭದ್ರತೆ