ಮೈಸೂರು :ದಶಪಥ ಯೋಜನೆಯ ಕ್ರೆಡಿಟ್ ಭಾರತ ಮಾತೆಗೆ, ದೇಶಕ್ಕೆ ಸಲ್ಲಿಕೆಯಾಗಬೇಕು ಎಂದು ಶಾಸಕ ರಾಮದಾಸ್ ಹೇಳಿದರು. ಇಂದಿನಿಂದ ಶಾಲೆ ಪುನಾರಂಭ ಹಿನ್ನೆಲೆ ವಿದ್ಯಾರಣ್ಯಪುರಂನಲ್ಲಿರುವ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡಿ ಸ್ವಾಗತ ಕೋರಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ಯೋಜನೆಯ ಕ್ರೆಡಿಟ್ ಇದು ಯಾರಿಗೂ ಸೇರಿದ್ದಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್. ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಇದು. ಇದು ನಾನು ಮಾಡಿದ್ದು, ನಾನು ಮಾಡಿದ್ದು ಎನ್ನುವುದು ಸರಿಯಲ್ಲ. ಇದು ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ ಎಂದರು.
ನನ್ನ ಕ್ಷೇತ್ರದಲ್ಲೂ ನಾನು ರಸ್ತೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಅದರ ಕ್ರೆಡಿಟ್ ನನ್ನದಲ್ಲ. ಎಲ್ಲಾ ಇಲಾಖೆ ವ್ಯವಸ್ಥೆಗೆ ಸೇರಿದ್ದಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿಯೂ ಅದು ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.
ಬಿಜೆಪಿ ಜನಾಶಿರ್ವಾದ ಯಾತ್ರೆಯಿಂದ ಕೊರೊನಾ ಹೆಚ್ಚುವ ಆತಂಕ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಯಾತ್ರೆಯಿಂದ ಮತ್ತಷ್ಟು ಕೊರೊನಾ ಹರಡದಂತೆ ಎಚ್ಚರಿಕೆವಹಿಸಬೇಕು. ಅದರಿಂದ ಕೊರೊನಾ ಬಂದರೆ ಅದಕ್ಕಿಂತ ದೊಡ್ಡ ಪಾಪದ ಕೆಲಸ ಮತ್ತೊಂದಿಲ್ಲ. ಕೋವಿಡ್ ನಿಯಮಗಳು ರಾಜಕಾರಣಿ, ಜನ ಸಾಮಾನ್ಯರು ಎಲ್ಲರಿಗೂ ಒಂದೇ.. ನಮ್ಮ ಯಾತ್ರೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಹೇಳಿದರು.