ಮೈಸೂರು: ಧೃತರಾಷ್ಟ್ರನ ಕುರುಡು ಪ್ರೀತಿ ಅವರ ಕುಟುಂಬವನ್ನೇ ನಾಶ ಮಾಡುತ್ತದೆ. ಮೊದಲು ನಿಮ್ಮ ಪುತ್ರ ವ್ಯಾಮೋಹ ಬಿಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿಎಸ್ವೈ ವಿರುದ್ಧ ಶಾಸಕ ಹೆಚ್.ಪಿ.ಮಂಜುನಾಥ್ ವಾಗ್ದಾಳಿ ಪತ್ರಕರ್ತರ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ನಿಮ್ಮ ಪುತ್ರ ವ್ಯಾಮೋಹ ಬಿಡಿ. ಯಾವ ಕುಟುಂಬದಲ್ಲೂ ನಿಮ್ಮ ರೀತಿ ರಾಜಕಾರಣ ಮಾಡಿಲ್ಲ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ'
ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸರ್ಕಾರದಿಂದ ತಾರತಮ್ಯವಾಗಿದೆ. ಇದಕ್ಕೆ ಸಿಎಂ ಬಿಎಸ್ವೈ ಅವರ ಕುಟುಂಬ ರಾಜಕಾರಣ ಕಾರಣ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬದ ಸರ್ಕಾರ ಇದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಗಂಭೀರವಾಗಿ ಆರೋಪಿಸಿದ್ದಾರೆ.
ಹುಣಸೂರು ತಾಲೂಕಿಗೆ ಯಡಿಯೂರಪ್ಪ ನವರ ಕೊಡುಗೆ ಏನೂ ಇಲ್ಲ. ನನ್ನ ವಿರುದ್ದ ಸೋತವನಿಗೆ ಯಡಿಯೂರಪ್ಪನವರು ಅಧಿಕಾರ ಕೊಟ್ಟಿದ್ದಾರೆ. ಕಳೆದ ಸರ್ಕಾರದಿಂದ ಬಂದ ಕೋಟ್ಯಾಂತರ ಹಣವನ್ನು ತಡೆ ಹಿಡಿದಿದ್ದಾರೆ. ಬೀದರ್ನಿಂದ ಮಂಗಳೂರಿನವರಗೆ ಕುಟುಂಬ ರಾಜಕೀಯ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರಕ್ಕೆ ಅನುದಾನ ನೀಡಿರುವುದು ವಿಜಯೇಂದ್ರಗೋಸ್ಕರ. ನನ್ನ ಕ್ಷೇತ್ರದ ಕಟ್ಟೆಮಳವಾಡಿ ಕಟ್ಟೆ ಅಭಿವೃದ್ಧಿಯಾಗಿಲ್ಲ. ಇದರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ಆದರೆ ಅಲ್ಲೇ ಪಕ್ಷದಲ್ಲಿರುವ ಯಡಿಯೂರಪ್ಪ ಅವರ ತಂಗಿ ಮಗನ ಫಾರಂ ರಸ್ತೆಗೆ ಕೋಟ್ಯಂತರ ರೂ. ಹಣ ನೀಡಿದ್ದಾರೆ. 3 ಕೋಟಿ ರೂ. ವೆಚ್ಚದಲ್ಲಿ ಧರ್ಮಾಪುರ ಬಳಿಯ ದೈತನಕೆರೆ ಅಭಿವೃದ್ಧಿಗೆ ಟೆಂಡರ್ ನೀಡಿದ್ದಾರೆ. ಸಿಎಂ ತಂಗಿ ಮಗ ಎಸ್.ಸಿ.ಅಶೋಕ್ ಅವರ ತೋಟಕ್ಕೆ ನೀರು ಹರಿಸಲು ದೈತ್ಯನ ಕರೆ ಅಭಿವೃದ್ಧಿ ಮಾಡ್ತಿದ್ದಾರೆ. ಒಬ್ಬ ಜನ ಪ್ರತಿನಿಧಿ ಕೇಳಿದ್ರೆ ಅನುದಾನ ಕೊಡಲ್ಲ. ಕುಟುಂಬಸ್ಥರಿಗೆ ಮಾತ್ರ ಕೋಟಿ ಕೋಟಿ ಹಣ ನೀಡ್ತಿದ್ದಾರೆ.
ಸಿಎಂ ರಾಜ್ಯ ಸರ್ಕಾರದ ದುಡ್ಡನ್ನು ಸ್ವಕುಟುಂಬಕ್ಕೆ ಬಳಸುತ್ತಿದ್ದಾರೆ. ಇಂದು 100% ಲೂಟಿ ಸರ್ಕಾರ. ಕುಟುಂಬ ರಾಜಕಾರಣದಿಂದ ಎಲ್ಲ ಮಂತ್ರಿಗಳಿಗೆ ಮಾರ್ಮಘಾತವಾಗಿದೆ. ನನ್ನ ಲೆಕ್ಕದಲ್ಲಿ ಯಡಿಯೂರಪ್ಪನವರು ಡಮ್ಮಿ ಎಂದು ಮಂಜುನಾಥ್ ಕಿಡಿಕಾರಿದರು.
ಹುಣಸೂರಿನ ಬಗ್ಗೆ ಯಾಕೆ ನಿಮಗೆ ಈ ತಾರತಮ್ಯ?. ಹುಣಸೂರಿನಲ್ಲಿ ನಿಮ್ಮವರು ಯಾರು ಇಲ್ಲ ಅಂತನಾ? ನಿಮ್ಮ ಕುಟುಂಬವನ್ನಾದರು ಹುಣಸೂರಿಗೆ ತಂದು ಬಿಡಿ. ನಿಮ್ಮ ಕುಟುಂಬಕ್ಕಾಗಿ ಈ ಸರ್ಕಾರ ನಡೆಸುತ್ತಿದ್ದೀರಾ? ಪಿಪಿಇ ಕಿಟ್, ಕೊರೊನಾ ವ್ಯಾಕ್ಸಿನ್ ಇದೆಲ್ಲ ತರುವುದರಲ್ಲಿ ನಿಮ್ಮ ಕುಟುಂಬದವರೆ ಇದ್ದಾರೆ. ಅದರ ದಾಖಲೆಯು ನನ್ನ ಬಳಿ ಇದೆ. ಹೈದ್ರಾಬಾದ್, ದೆಹಲಿಯಿಂದ ಎಲ್ಲ ಬಂದಿರಬಹುದು. ಆದ್ರೆ ಅದು ಬರುವುದಕ್ಕೆ ಒಂದು ಸಂಸ್ಥೆ ಬೇಕಲ್ಲವೇ? ಅದು ನಿಮ್ಮ ಕುಟುಂಬದವರೇ ವಹಿಸಿಕೊಂಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.
ಹುಣಸೂರಿಗೆ ನಿಮ್ಮವರನ್ನೆ ನೇಮಕ ಮಾಡಿ
ನಿಮ್ಮವರನ್ನೇ ಯಾರದರು ಹುಣಸೂರಿಗೆ ನೇಮಕ ಮಾಡಿ. ಅವರ ಮುಖಾಂತರವೇ ನಾವು ಕೆಲಸ ಮಾಡಿಸಿಕೊಳ್ತಿವಿ. ಸ್ವಪಕ್ಷದವರೇ ಸಿಎಂ ವಿರುದ್ಧ ಗಂಭೀರ ಆರೋಪ ಮಾಡ್ತಿದ್ದಾರೆ. ಆದರೂ ಏನು ಗೊತ್ತಿಲ್ಲದಂತೆ ಸಿಎಂ ಹಾಗೂ ಬಿಜೆಪಿ ವರ್ತಿಸುತ್ತಿದೆ. ನನ್ನ ಪ್ರಕಾರ ಮೋದಿ ಅಮಿತ್ ಶಾ ಕಣ್ತಪ್ಪಿಸಿ ಸಿಎಂ ಹಣ ಮಾಡುತ್ತಿದ್ದಾರೆ. ಎಲ್ಲ ವಿಚಾರದಲ್ಲೂ ಹಣ ಹೊಡೆಯುತ್ತಿದ್ದಾರೆ. ಈ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಾಗದಂತೆ ಇಡೀ ಸಿಎಂ ಕುಟುಂಬ ಸೇರಿಕೊಂಡಿದೆ ಎಂದು ಆರೋಪಿಸಿದರು. ಇದೇ ಸಂದರ್ಭ ಶಾಸಕ ಯತೀಂದ್ರ ಸಿದ್ದರಾಮಯ್ಯ ಕೂಡ ರಾಜ್ಯ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ರಾಕೇಶ್ ಟಿಕಾಯತ್ ಕಾರ್ ಮೇಲೆ ದಾಳಿ: ಕ್ರಮಕ್ಕೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ