ಮೈಸೂರು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ಸಿದ್ಧಾರ್ಥ್ ಲೇಔಟ್ನ ವ್ಯಕ್ತಿಯ ಮೃತದೇಹ, ಕಾರಂಜಿಕೆರೆಯಲ್ಲಿ ಪತ್ತೆಯಾಗಿದೆ. ವಿಸ್ತಾರವಾದ ಕಾರಂಜಿ ಕೆರೆಯಲ್ಲಿ ತೆಪ್ಪದ ಮೂಲಕ ರಕ್ಷಣಾ ಸಿಬ್ಬಂದಿ ಹುಡುಕಿದಾಗ ಎಂ.ಚಂದ್ರೇಗೌಡರ ಮೃತದೇಹ ಸಿಕ್ಕಿದೆ.
ನಗರದ ಸಿದ್ದಾರ್ಥ ಬಡಾವಣೆಯ ವಿನಯ ಮಾರ್ಗದ ನಿವಾಸಿ ಚಂದ್ರೇಗೌಡ, ಮೆಸ್ ನಡೆಸಿಕೊಂಡು ಮನೆಯಲ್ಲಿ ತನ್ನ ಪತ್ನಿ ಮಹಾಲಕ್ಷ್ಮಿ ಜೊತೆ ವಾಸವಿದ್ದರು. ನಿನ್ನೆ ತಡರಾತ್ರಿ ಸುರಿದ ಮಳೆಗೆ ಚಂದ್ರೇಗೌಡರ ಮನೆಯ ಪಕ್ಕದ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿತ್ತು. ಹೀಗಾಗಿ ಚರಂಡಿಯಲ್ಲಿ ಕಸ ತೆಗೆಯಲು ಸಹಾಯ ಮಾಡಿ ಅಂತಾ ಪಕ್ಕದ ಮನೆಯವರು ಕೇಳಿದ್ದರು. ಅದಕ್ಕೆ ಚಂದ್ರೇಗೌಡರು ಹೊರ ಹೋಗಿದ್ದಾಗ ಪಕ್ಕದಲ್ಲಿಯೇ ಇದ್ದ ಕಾಲುವೆಗೆ ಕಾಲು ಜಾರಿ ಬಿದ್ದಿದ್ದರು.