ಮೈಸೂರು:ನಾನು ಸಿನಿಮಾದಲ್ಲೂ ನಾಯಕ, ರಾಜಕೀಯದಲ್ಲೂ ನಾಯಕ. ಆದರೆ, ನನ್ನನ್ನು ಖಳನಾಯಕನನ್ನಾಗಿ ಮಾಡುವ ಯತ್ನ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವಲತ್ತು ಕೊಂಡರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದಾರೆ. ಇದು ಮನಸ್ಸಿಗೆ ಬಹಳ ನೋವಾಗಿದೆ. ಅದರಿಂದ ಸ್ವಾಮೀಜಿ ಮುಂದೆ ನೋವನ್ನು ಹೇಳಿಕೊಂಡರೆ ಹಗುರವಾಗುತ್ತದೆ ಎಂದು ಮಠಕ್ಕೆ ಬಂದಿದ್ದೀನಿ ಎಂದರು.
ವೈಯಕ್ತಿಕವಾಗಿ ನಾನು ನೀಡಿದ ಒಂದೇ ಒಂದು ಹೇಳಿಕೆಯಿಂದ ಇಷ್ಟೆಲ್ಲ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ. ಇದರ ಹಿಂದೆ ಯಾರದೋ ಪ್ರಚೋದನೆ ಇರಬಹುದು ಎಂದು ಹೇಳಿದರು.