ಮೈಸೂರು: ಚಿರತೆ ದಾಳಿಗೆ ಬಲಿಯಾದ ವೃದ್ಧೆ ಮತ್ತು ಅಪ್ರಾಪ್ತನ ಬಾಲಕನ ಮನೆಗೆ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ಎರಡು ಕುಟುಂಬಗಳಿಗೂ ಸಾಂತ್ವನ ಹೇಳಿದರು. ತಿ.ನರಸೀಪುರ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮರ ಮನೆಗೆ ಮೊದಲು ಭೇಟಿ ನೀಡಿ ಬಳಿಕ, ಚಿರತೆ ದಾಳಿಯಲ್ಲಿ ಬಲಿಯಾದ ಹೊರಳಹಳ್ಳಿ ಗ್ರಾಮದ ಬಾಲಕ ಜಯಂತ್ ಮನೆಗೆ ಭೇಟಿ ನೀಡಿದ್ದರು. ಬಾಲಕನ ಸಾವು ನೆನೆದು ಎಸ್.ಟಿ.ಸೋಮಶೇಖರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಸಿದ್ದಮ್ಮ ಮತ್ತು ಜಯಂತ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಚೆಕ್ ವಿತರಣೆ ಮಾಡಿದರು.
ನಮ್ಮ ಮಗನನ್ನ ಬಲಿ ಪಡೆದಿರುವ ಚಿರತೆಯನ್ನು ಮೊದಲು ಕೊಲ್ಲಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಮುಂದೆ ಜಯಂತ್ ಕುಟುಂಬಸ್ಥರು ಅಳಲು ತೋಡಿಕೊಂಡರು. ಬಳಿಕ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಈ ಕುರಿತು ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳ ಮೀಟಿಂಗ್ ಮಾಡಿ, ಕೆಲವು ತೀರ್ಮಾನಗಳನ್ನ ಸಿಎಂ ಅವರೇ ತೆಗೆದುಕೊಳ್ಳಲಿದ್ದಾರೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳು ಕಬ್ಬನ್ನು ಕಟಾವು ಮಾಡಲು ಆದೇಶ ಹೊರಡಿಸಿದ್ದಾರೆ. ಯಾವ ಚಿರತೆ ದಾಳಿ ಮಾಡುತ್ತಿದೆ. ಅದನ್ನ ಶೂಟೌಟ್ ಮಾಡಲು ತಿಳಿಸಿದ್ದಾರೆ. ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಸಂಚಾರ ನಡೆಸಲು ತೊಂದರೆಯಾಗುತ್ತಿದೆ. ಕೆಲವೊಂದು ಮರಗಳನ್ನ ಕಟಾವು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು. ಅರಣ್ಯ ಇಲಾಖೆಯಲ್ಲಿ ಯಾರು ಟಾಪ್ ಮೋಸ್ಟ್ ಅಧಿಕಾರಿಗಳು ಇದ್ದಾರೆ, ಅವರನ್ನೇ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತೆ. ಮತ್ತೆ ಇದೇ ರೀತಿಯ ಘಟನೆಗಳು ಮುಂದುವರೆದರೆ ಅಧಿಕಾರಿಗಳ ತಲೆದಂಡ ಆಗುತ್ತೆ. ಇದು ಪ್ರಾಣಿಗಳಿಗೆ ಸಂಬಂಧಪಟ್ಟ ವಿಚಾರ ಆಗಿರುವ ಕಾರಣ ಅಂತಿಮವಾಗಿ ಸಿಎಂ ಅವರೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಹೇಳಿದರು.
ಇನ್ನು, 11 ವರ್ಷದ ಬಾಲಕ ಜಯಂತ್ ಇತ್ತೀಚೆಗೆ ಬಯಲು ಶೌಚಕ್ಕಾಗಿ ರಾತ್ರಿ ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಎಳೆದೊಯ್ದಿತ್ತು. ಅಲ್ಲದೇ ಕೆಲವು ದಿನಗಳ ಹಿಂದಷ್ಟೇತಿ.ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ ವೃದ್ಧೆ ಬಲಿಯಾಗಿದ್ದರು. ಸಿದ್ದಮ್ಮ ಎಂಬ ವೃದ್ಧೆ ಮನೆಯಾಚೆ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿ ಎಳೆದೊಯ್ದಿ ಬಲಿ ಪಡೆದಿತ್ತು. ಈ ಇಬ್ಬರನ್ನು ಬಲೆ ಪಡೆದಿದ್ದು ಒಂದೇ ಚಿರತೆ ಎಂದು ಶಂಕಿಸಲಾಗಿತ್ತು.