ಮೈಸೂರು:ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ರೀಡಾ ಉಪ ಸಮಿತಿಯಿಂದ ಆಯೋಜಿಸಲಾಗಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ಬನ್ನೂರು ಜಂಕ್ಷನ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಿದ್ದು, ಇಂದು ಸೈಕಲ್ ಸವಾರರಿಗೆ ಸ್ಪರ್ಧೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಕ್ರೀಡೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತದೆ. ನಮ್ಮಲ್ಲಿನ ಚಾತುರ್ಯತೆ, ಬುದ್ಧಿವಂತಿಕೆಯನ್ನು ಹೊರ ತರಲಿದೆ ಎಂದರು.
ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಸೈಕಲ್ ತುಳಿಯುವುದು ಅಂಗಾಂಗಗಳ ಚಲನೆಗಳ ವೇಗ ಹೆಚ್ಚು ಮಾಡಲಿದ್ದು, ಗಟ್ಟಿ ಮುಟ್ಟಾಗಿರಬಹುದು. ಸ್ಪರ್ಧೆಯಲ್ಲಿ ಯಾರೂ ಆತುರ ಪಡಬೇಡಿ. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಗೆಲುವು, ಅದೇ ಒಂದು ಸಾಧನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಯಶಸ್ವಿಯಾಗಿ ಸಾಗಿರಿ ಎಂದು ಶುಭ ಹಾರೈಸಿದರು.
ಈ ಸ್ಪರ್ಧೆಯಲ್ಲಿ ಸುಮಾರು 180 ಪುರುಷರು ಭಾಗಿಯಾಗಿದ್ದು, ಬನ್ನೂರು ಜಂಕ್ಷನ್ನಿಂದ ಪ್ರಾರಂಭಿಸಿ ಟಿ.ನರಸೀಪುರ ಮೂಲಕ ಮೂಗೂರು ತಲುಪಿ, ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಲಲಿತಾದ್ರಿಪುರ ಮೂಲಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಅಂತ್ಯವಾಗಲಿದೆ. ಸುಮಾರು 80 ಮಹಿಳೆಯರು ಈ ಸ್ಪರ್ದೆಯಲ್ಲಿ ಭಾಗಹಿಸಿದ್ದು, ಇವರು ಮೂಗೂರಿನಿಂದ -ಚಾಮುಂಡಿ ಬೆಟ್ಟದ ದೇವಿಕೆರೆ ತನಕ ಸೈಕಲ್ನಲ್ಲಿ ಚಲಿಸಬೇಕಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 30,000/-, ದ್ವಿತೀಯ 25,000/-, ತೃತೀಯ 20,000 ರೂ. ನಗದು ಬಹುಮಾನ ನೀಡಲಾಗುತ್ತದೆ.