ಕರ್ನಾಟಕ

karnataka

ETV Bharat / state

ವೈದ್ಯರ ಪ್ರತಿಭಾ ಪಲಾಯನ ಕಡಿವಾಣಕ್ಕೆ ಕಾನೂನು ರೂಪಿಸಿ; ಸಚಿವ ಎಸ್‌.ಟಿ. ಸೋಮಶೇಖರ್ - ರಾಜ್ಯದಲ್ಲಿ ವೈದ್ಯರ ಕೊರತೆ

ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ಪಕ್ಷ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ನಮ್ಮ ರಾಜ್ಯ ವೈದ್ಯರ ಪಲಾಯನವನ್ನ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಚಿವ ಎಸ್.ಟಿ. ಸೋಮಶೇಖರ್​ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.

somashekhar
somashekhar

By

Published : May 23, 2021, 4:48 PM IST

ಮೈಸೂರು:ನಮ್ಮ ರಾಜ್ಯದ ವೈದ್ಯರ ಪಲಾಯನವನ್ನು ತಪ್ಪಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಹಾಗೇ ನಮ್ಮ ರಾಜ್ಯ ಸರ್ಕಾರ ಸಹ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಅಗಾಧವಾಗಿ ಖರ್ಚು ಮಾಡುತ್ತಾ ಬಂದಿದೆ. ಸರ್ಕಾರಿ ಕೋಟಾದಲ್ಲಿ ಓದುವ ಒಬ್ಬ ವೈದ್ಯಕೀಯ ವಿದ್ಯಾರ್ಥಿಯು ವಿದ್ಯಾಭ್ಯಾಸ ಅವಧಿಯನ್ನು ಮುಗಿಸುವ ಹೊತ್ತಿಗೆ ಸರ್ಕಾರದಿಂದ 40ರಿಂದ 50 ಲಕ್ಷ ರುಪಾಯಿಯನ್ನು ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಇಷ್ಟೆಲ್ಲ ವೆಚ್ಚ ಮಾಡಿದರೂ ಸಹ ನಮ್ಮ ಪ್ರತಿಭೆಗಳು ನಮಗೆ ದಕ್ಕುತ್ತಿಲ್ಲ. ಕೆಲವು ವೈದ್ಯರು ನಮ್ಮ ಸೌಲಭ್ಯವನ್ನು ಪಡೆದು ಕಲಿತು ವಿದೇಶಗಳಿಗೆ ಹೋಗಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ತಮ್ಮ ಕಾಲಾವಧಿಯಲ್ಲಿ ಇಂಥದ್ದೊಂದು ಪ್ರಕ್ರಿಯೆಗೆ ಕಡಿವಾಣ ಬೀಳಬೇಕಿದೆ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಪ್ರತಿಭಾ ಪಲಾಯನ ನಿಲ್ಲುವಂತಾಗಬೇಕು ಎಂದು ಸೋಮಶೇಖರ್ ಹೇಳಿದ್ದಾರೆ.

ಹೀಗೆ ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ಪಕ್ಷ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ಮೂಲಕ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಹ ನುರಿತ ತಜ್ಞ ವೈದ್ಯರ ಸೇವೆ ಲಭಿಸಬೇಕು. ಇಂದು ಹಳ್ಳಿ ಎಂದರೆ ಮೂಗು ಮುರಿಯುವ ಮನೋಭಾವ ಹೆಚ್ಚಾಗುತ್ತಿದೆ. ಆದರೆ, ಹಳ್ಳಿ ಸಶಕ್ತವಾಗಿದ್ದರೆ, ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವ ಮನೋಭಾವಕ್ಕೆ ನಾವು ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ.

ಹೀಗಾಗಿ ನಮ್ಮ ರಾಜ್ಯದ ಸಕಲ ಸೌಕರ್ಯವನ್ನು ಪಡೆದು ವೈದ್ಯರಾಗಿ ಹೊರ ಬರುವ ಪ್ರತಿಯೊಬ್ಬರೂ ಸಹ ರಾಜ್ಯದಲ್ಲಿ 5 ವರ್ಷ ಕಡ್ಡಾಯವಾಗಿ ವೃತ್ತಿಯನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನೊಂದನ್ನು ತಾವು ರೂಪಿಸಬೇಕು. ಈಗಾಗಲೇ ಹೀಗೆ ಸೇವೆ ಮಾಡುವ ವೈದ್ಯರಿಗೆ ಅತಿ ಹೆಚ್ಚಿನ ವೇತನವನ್ನು ನೀಡುತ್ತೇವೆ. ಸೌಲಭ್ಯಗಳನ್ನು ಕೊಡುತ್ತೇವೆಂದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಕಲ್ಪಿಸಿಕೊಡುವ ಮೂಲಕ ಹಳ್ಳಿಗಳಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಬೇಕಿದೆ. ಈ ಮೂಲಕ ನಮ್ಮ ರಾಜ್ಯದ ಹಣವನ್ನು ಬಳಸಿ ವೈದ್ಯರಾದವರ ಸೇವೆಯನ್ನು ನಮ್ಮ ರಾಜ್ಯದ ನಾಗರಿಕರಿಗೇ ಲಭಿಸುವಂತಾಗಬೇಕು.

ಈಗ ಕೊರೊನಾ ಸಂಕಷ್ಟ ಕಾಲವಾಗಿರುವುದರಿಂದ ಇಂಥದ್ದೊಂದು ನಿಲುವಿನ ಅಗತ್ಯವಿದೆ. ಜತೆಗೆ ಸರ್ಕಾರಿ ಸೌಲಭ್ಯವನ್ನು ಪಡೆಯುವ ಪ್ರತಿಯೊಬ್ಬರಲ್ಲೂ ಇಂತಹ ಮನೋಭಾವವು ಬರಬೇಕಿದೆ. ಇಂತಹ ಒಂದು ಸಂದಿಗ್ಧ ಸಂದರ್ಭದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ಸಿಗಬೇಕೆಂದರೆ ಕಠಿಣವಾದ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸದನದಲ್ಲಿ ಮಂಡಿಸಿ ಜಾರಿಗೊಳಿಸಬೇಕೆಂದು ಸೋಮಶೇಖರ್ ಮನವಿ ಮಾಡಿದ್ದಾರೆ.

ABOUT THE AUTHOR

...view details