ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನಿವೃತ್ತ ವೈದ್ಯರ ಜೊತೆಗೆ ಎಂಬಿಬಿಎಸ್ ಮುಗಿಸುತ್ತಿರುವ ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. 6 ತಿಂಗಳು ಗುತ್ತಿಗೆ ಆಧಾರದ ಮೇಲೆ ಅಥವಾ ಖಾಯಂ ಆಗಿ ತೆಗೆದುಕೊಳ್ಳಲು ಚಿಂತನೆ ನಡೆದಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಲಕ್ಷ ಸಂಬಳ ಕೊಡ್ತೇವೆ ಅಂದ್ರೂ ವೈದ್ಯರೇ ಬರುತ್ತಿಲ್ಲ: ಸಚಿವ ಸೋಮಶೇಖರ್
ಕೋವಿಡ್ ಕಾಲದಲ್ಲಿ ವೈದ್ಯರ ಕೊರತೆ ಸಹ ಎದುರಾಗಿದ್ದು, ಲಕ್ಷ ಲಕ್ಷ ಸಂಬಳ ಕೊಡುತ್ತೇವೆ ಎಂದರೂ ವೈದ್ಯರು ಬರಲು ರೆಡಿ ಇಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ರು.
ಎನ್.ಆರ್. ಕ್ಷೇತ್ರದಲ್ಲಿ ವೈದ್ಯರ ಕೊರತೆ ವಿಚಾರವಾಗಿ ಜಿಲ್ಲಾ ಪಂಚಾಯ್ತಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಿಂದ 66 ಸಾವಿರ, ಮುಡಾ ಹಾಗೂ ಜಿಲ್ಲಾಡಳಿತ ಸೇರಿ ಒಂದು ಲಕ್ಷ ರೂ. ವೇತನ ನೀಡ್ತೇವೆ ಅಂದರೂ ವೈದ್ಯರು ಬರುತ್ತಿಲ್ಲ ಎಂದರು.
ಶೀಘ್ರದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಜಿಲ್ಲೆಯಲ್ಲಿ ಔಷಧಿ ಕೊರತೆ ಇದ್ದದ್ದನ್ನ ರಾಮದಾಸ್ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಮೊದಲನೇ ಹಂತದಲ್ಲಿ ಔಷಧಿ ಖರೀದಿಗೆ ಟೆಂಡರ್ ಕರೆಯಲಾಗಿದೆ. ಈಗ ಟೆಂಡರ್ ಪ್ರಕ್ರಿಯೆ ಬೇಡ ಎಂದಿದ್ದಾರೆ. ಇದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಜಿಲ್ಲಾ ಮಟ್ಟದಲ್ಲೇ ಖರೀದಿಗೆ ವ್ಯವಸ್ಥೆ ಮಾಡುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.